ಬೆಳಗಾವಿಯಲ್ಲಿ ಕುರುಬ ಸಮಾಜದ ಬೃಹತ್ ಸಮ್ಮೇಳನ ; ಸಿಎಂ ಭಾಗಿ
ಬೆಳಗಾಬಿ : ಭಾರತದ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಕುರುಬ ಸಮಾಜದಿಂದ ಅ.2ರಿಂದ 3ರವರೆಗೆ ಬೆಳಗಾವಿಯಲ್ಲಿ ಶಪಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಅಧಿವೇಶ ನಡೆಯಲಿದೆ ಎಂದು ಶಪಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ವಿಶ್ವನಾಥ ಹೇಳಿದರು.
ಭಾನುವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮಾಜದ ಭವಿಷ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾವು ಏನೇನೂ ಕೇಳಬಹುದು ಎಂದು ಅ.2 ರ ಸಭೆಯಲ್ಲಿ ಚರ್ಚೆ ನಡೆಸಿ ಅ.3 ರಂದು ನಡೆಯುವ ಅಧಿವೇಶನದಲ್ಲಿ ನಿರ್ಧಾರ ಪ್ರಕಟಿಸುವ ಸಿದ್ಧತೆ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಎಲ್ಲರ ಜೊತೆಗೆ ಬದುಕಿ ಬಾಳುತ್ತಿರುವ ಕುರುಬ ಸಮುದಾಯವು ತನ್ನ ಪ್ರಥಮ ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಲಾಗುತ್ತಿದೆ ಎಂದರು.
ಬ್ರಿಟಿಷರ್ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ಬೃಹತ್ ವೇದಿಕೆಗೆ ಇಡಲಾಗಿದೆ. ಈ ಒಂದು ಅಧಿವೇಶನದಲ್ಲಿ ಕುರುಬ ಸಮಾಜದ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಬೇರೆ ಬೇರೆ ರಾಜ್ಯದಿಂದ ಬರುತ್ತಿರುವ ಪ್ರತಿನಿಧಿಗಳು ರಾಷ್ಟ್ರೀಯ ಅಭಿನಂದನೆಗಳನ್ನು ಮಾಡಲಿದ್ದಾರೆ ಎಂದರು.
ಶಪಡ್೯ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರ ಮಟ್ಟದ ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನಾಯಕತ್ವ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಬೆಳಗಾವಿ ಶಾಸಕರ ಸಹಾಯದೊಂದಿಗೆ ಅ.3 ರಂದು ಈ ಅಧಿವೇಶನ ನಡೆಯಲಿದೆ. ಅ.2 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ನ್ಯಾಷನಲ್ ಎಕ್ಸಿಕ್ಯುಟಿವ್ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ರಾಜ್ಯದ ವಿವಿಧ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಕುರುಬ ಸಮಾಜದ ಅಧಿವೇಶನ ಎಲ್ಲರಿಗೂ ಹಿರಿಮೆ ತಂದಿರುವ ಸಮಾವೇಶ. ಭಾರತದಲ್ಲಿ ಸುಮಾರು 12 ಕೋಟಿ ಜನಸಂಖ್ಯೆ ಕುರುಬರದ್ದು ಇದೆ ಎನ್ನುವುದು ತಿಳಿಸಿದ್ದು ವಿಶ್ವನಾಥ ಅವರು. ಅಧಿವೇಶನದಲ್ಲಿ ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸಲಿದ್ದಾರೆ. ಇಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಭಾರತದ ಕುರುಬರ ಹಿತದೃಷ್ಟಿಯಿಂದ ಸುಮಾರು 10 ಬೇಡಿಕೆಗಳನ್ನು ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಪ್ರಮುಖವಾಗಿ ಕೇಂದ್ರ ಸರಕಾರದ ಅಂಗಳದಲ್ಲಿರುವ ಕುರುಬ ಸಮಾಜದ ಎಸ್ಟಿ ಮೀಸಲಾತಿಯನ್ನು ಶೀಘ್ರದಲ್ಲೇ ಮಂಜೂರು ಮಾಡಬೇಕು ಹಾಗೂ ರಾಷ್ಟ್ರೀಯ ಕುರುಬರ ಏಳಿಗೆಗಾಗಿ 10 ಬೇಡಿಕೆ ಮಂಡಣೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್, ಬೆಳಗಾವಿ ಕೆಎಂಎಫ್ ಅಧ್ಯಕ್ಷ ವಿವೇಕರಾವ್ ಪಾಟೀಲ, ವೇದ ಪ್ರಕಾಶ, ಕುರುಬರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಪ್ರೇಮ ಲತಾ, ಲಕ್ಷ್ಮಣರಾವ್ ಚಿಂಗಳೆ ಉಪಸ್ಥಿತರಿದ್ದರು.