ಅಭಿಮಾನಿಗಳಿಗೆ ಆಟ ; ಕಾಂಗ್ರೆಸ್ ನಾಯಕರಿಗೆ ಪ್ರಾಣ ಸಂಕಟ
ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಸಧ್ಯ ಸಿಎಂ ಸ್ಥಾನದ ಚರ್ಚೆ ಜೋರಾಗಿ ನಡೆದಿದೆ. “ ಕೂಸು ಹುಟ್ಟುವ ಮುನ್ನವೇ ಕುಲಾವಿ ” ಹೊಲಿಸಲು ಕೆಲ ನಾಯಕರ ಅಭಿಮಾನಿಗಳು ಸಿಎಂ ಹುದ್ದೆ ಕುರಿತು ಸೋಶಿಯಲ್ ಮೀಡಿಯಾದಲಲ್ಲಿ ಫೋಸ್ಟ್ ಹಾಕುವ ಮೂಲಕ ತಮ್ಮ ನಾಯಕರಿಗೆ ಸಂಕಷ್ಟ ತಂದೊಡ್ಡಿರುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಹೌದು ಈಗಾಗಲೇ ರಾಜ್ಯದ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದಿಂದ ಇಳಿಯುತ್ತಾರೆ ಎಂಬ ಹಗಲುಗನಸಿನಲ್ಲಿ ಅನೇಕರಿದ್ದಾರೆ. ಅಷ್ಟಕ್ಕೂ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪ ಬರುವುದು ಬಾಕಿ ಇದ್ದರು ಈಗಾಗಲೇ ಕೆಲವರು ಸಿಎಂ ಖುರ್ಚಿ ಆಸೆಯನ್ನು ಹೊರಹಾಕುತ್ತಿದ್ದಾರೆ.
ನಾನು ಸಿಎಂ ಎಂಬ ವರಸೆ ಪ್ರಾರಂಭವಾಗಿದ್ದು ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಿಗೆ ಇರುಸು ಮುರುಸಿ ತರಿಸಿದೆ. ಈಗಾಗಲೇ ಎಂ.ಬಿ ಪಾಟೀಲ್, ಶರಣಪ್ರಕಾಶ್ ದರ್ಶನಾಪುರ, ಅರವಿಂದ ದೇಶಪಾಂಡೆ ಅವಕಾಶ ಸಿಕ್ಕರೆ ನಮಗೂ ಸಿಎಂ ಹುದ್ದೆ ಇರಲಿ ಎಂದೇ ಹೇಳಿಕೆ ನೀಡಿದ್ದಾರೆ.
ಇನ್ನೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಇದು ಸ್ವತಃ ಸತೀಶ್ ಜಾರಕಿಹೊಳಿಗೂ ಮುಜುಗರ ಉಂಟುಮಾಡಿದ್ದು ಸುಳ್ಳಲ್ಲ.
ನಾನು 2028 ಕ್ಕೆ ಸಿಎಂ ಕನಸು ಇಟ್ಟುಕೊಂಡವನು. ಯಾರೋ ಒಬ್ಬರು ನಾನು ಸಿಎಂ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ರಾಜ್ಯದ ಜನರ ಅಭಿಪ್ರಾಯ ಆಗುವುದಿಲ್ಲ ಎಂದು ಬಹಿರಂಗವಾಗಿ ಸಚಿವ ಸತೀಶ್ ಹೇಳೆಕೆ ನೀಡಿದ್ದಾರೆ. ಜೊತೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿಗೆ ಸಿಎಂ ಹುದ್ದೆಯ ಮುಜುಗರ ಉಂಟುಮಾಡಿದ್ದು ಸುಳ್ಳಲ್ಲ.
ಇನ್ನೂ ಅಭಿಮಾನಿಗಳ ಅವಾಂತರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಡಾ. ಜಿ. ಪರಮೇಶ್ವರ ಅವರಿಗೂ ತಟ್ಟಿದೆ. ಕಾರ್ಯಕ್ರಮ ಒಂದರಲ್ಲಿ ಮುಂದಿನ ಸಿಎಂ ಪರಮೇಶ್ವರ ಎಂದು ಅಭಿಮಾನಿ ಕೂಗಿದ್ದೇ ತಡ, ಪರಮೇಶ್ವರ ಅಭಿಮಾನಿಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇದೇ ಕಾರಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೂ ಕೂಡಾ ಸಿಎಂ ಬದಲಾವಣೆ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಂತ ಜನಪ್ರಿಯ ನಾಯಕ ಇರುವ ಸಂದರ್ಭದಲ್ಲೇ ಕೆಲ ನಾಯಕರು ಕ್ಷುಲ್ಲಕವಾಗಿ ಆಡುತ್ತಿರುವುದೇ ವಿರೋಧ ಪಕ್ಷ ಬಿಜೆಪಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ. ಕೋರ್ಟ್ ಪ್ರಕರಣ ಇನ್ನೂ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆ ತಮ್ಮದೇ ನಾಯಕರಿಗೆ ಮುಜುಗರ ತರಿಸಿದ್ದಂತು ಸುಳ್ಳಲ್ಲ.
- ಬೆಳಗಾವಿ ವಾಯ್ಸ್ ಪೊಲಿಟಿಕಲ್ ಡೆಸ್ಕ್


