ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ; ಆರು ಸೇತುವೆ ಜಲಾವೃತ
ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು ಕೇವಲ ಒಂದೇ ತಿಂಗಳ ಅಂತರದಲ್ಲಿ ಎರಡನೇ ಅವಧಿಗೆ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಕೃಷ್ಣಾ, ವೇದಗಂಗಾ, ದೂದಗಂಗಾ ನದಿ ಒಳ ಹರಿವು ಹೆಚ್ಚಾಗಿದ್ದು ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ ನದಿಯ ಕೆಳಹಂತದ ಆರು ಸೇರುವೆಗಳು ಜಲಾವೃತಗೊಂಡಿವೆ. ಕಳೆದ 20 ದಿನಗಳ ಹಿಂದೆಯಷ್ಟೇ ನಿರಂತರ ಮಳೆಯಿಂದ ಉಂಟಾಗಿದ್ದ ಕೃಷ್ಣಾ ನದಿ ಭಾಗದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದಲ್ಲದೆ ಸಾವಿರಾರು ಜನ ನಿರಾಶ್ರಿತರ ಶಿಬಿರ ಸೇರಿದ್ದರು.
ಮತ್ತೆ ಮಳೆ ಆರ್ಭಟ ಜೋರಾದ ಹಿನ್ನಲೆಯಲ್ಲಿ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಸೇತುವೆ ಜಲಾವೃತಗೊಂಡಿವೆ. ದೂದಗಂಗಾ ನದಿಯ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಬೋಜ್-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಮುಳುಗಡೆಯಾಗಿವೆ. ಇನ್ನೂ ಸರಸಿಂಹವಾಡಿಯ ದತ್ತ ಮಂದಿರ ಜಲಾವೃತಗೊಂಡಿದೆ.
ಈಗಾಗಲೇ ಕಳೆದ ಮೂರು ವಾರಗಳ ಹಿಂದೆ ಸಂಭವಸಿದ ಪ್ರವಾಹದಲ್ಲಿ ಉಂಟಾದ ಬೆಳೆ ಹಾನಿ ಸಮೀಕ್ಷೆ ಈಗಷ್ಟೇ ಪ್ರಾರಂಭವಾಗಿದೆ. ಈ ಮಧ್ಯೆ ಮತ್ತೊಮ್ಮೆ ಪ್ರವಾಹದ ಛಾಯೆ ಆವರಿಸಿದ್ದು ಸರ್ಕಾರದ ನೆರವಿಗೆ ಬರಬೇಕು ಎಂಬುದು ಜನರ ಆಗ್ರಹವಾಗಿದೆ.