
ಬೆಳಗಾವಿ -ಉರುಳಿ ಬಿದ್ದ ಬಸ್ ; ತಪ್ಪಿದ ಅನಾಹುತ

ರಾಮದುರ್ಗ : ಘಾಟ್ ನಲ್ಲಿ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಉರುಳಿ ಬಿದ್ದು, ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್ ನಲ್ಲಿ ನಡೆದಿದೆ.
ಜಮಖಂಡಿ ಡಿಪೋಗೆ ಸೇರಿದ ಬಸ್ ಇದಾಗಿದ್ದು ಧಾರವಾಡದಿಂದ ಜಮಖಂಡಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ತಾಲೂಕಿನ ಮುಳ್ಳೂರ ಘಾಟ್ ನಲ್ಲಿ ಎದುರಿಗೆ ಬಂದ ಕಾರನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕ ಉರುಳಿದೆ. ಬಸ್ ನಲ್ಲಿ ಒಟ್ಟು 32 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅವರಲ್ಲಿ ಐದು ಜನರಿಗೆ ಗಾಯಗಳಾಗಿವೆ. ತಕ್ಷಣದಲ್ಲಿ ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಕಳುಹಿಸಿದ್ದಾರೆ. ಈ ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.