Select Page

Advertisement

ಸಿಎಂ ಜೊತೆ ಚರ್ಚಿಸಿ ಪ್ರಸಕ್ತ ಸಾಲಿನ ಕಬ್ಬು ಖರೀದಿ ದರ ನಿಗದಿ- ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ

ಸಿಎಂ ಜೊತೆ ಚರ್ಚಿಸಿ ಪ್ರಸಕ್ತ ಸಾಲಿನ ಕಬ್ಬು ಖರೀದಿ ದರ ನಿಗದಿ- ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ

ಬೆಂಗಳೂರು : 2022-23ನೇ ಸಾಲಿನ ಕಬ್ಬು ಖರೀದಿ ದರ ನಿಗದಿಗೊಳಿಸಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ, ಆ ಬಳಿಕ ಪ್ರಸಕ್ತ ಹಂಗಾಮಿನ ಕಬ್ಬು ಖರೀದಿ ದರ ನಿಗದಿಪಡಿಸಲಾಗುವುದು” ಎಂದು ಮಾನ್ಯ ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಹೇಳಿದರು.

2022-23ನೇ ಹಂಗಾಮಿಗೆ ಕಬ್ಬು ಬೆಲೆ ನಿಗದಿ ಮಾಡುವ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಉದ್ದೇಶದೊಂದಿಗೆ ಅಕ್ಟೋಬರ್ 15 ರಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನಸೌಧದ ಕೊಠಡಿ ಸಂಖ್ಯೆ 334ರಲ್ಲಿ ಸಭೆ ನಡೆಯಿತು.

ಕಬ್ಬು ಬೆಳೆಗಾರರಿಗೆ ನೀಡಬೇಕಿದ್ದ ಬಾಕಿ ಪಾವತಿ (ಖಾಸಗಿ& ಸಹಕಾರಿ) ಶೆ.99.9 ರಷ್ಟು ಸಂಪೂರ್ಣವಾಗಿ ಆಗಿದೆ. ನಷ್ಟದಲ್ಲಿರುವ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಬೈಪ್ರಾಡಕ್ಟ್ ಗಳು ಬಂದ ನಂತರ ಕಬ್ಬಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಪುನಶ್ಚೇತನಗೊಂಡಿರುವ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭಗೊಂಡಿದೆ. ಮಂಡ್ಯದ ಮೈಶುಗರ್ ನಲ್ಲಿ ಕ್ರಶಿಂಗ್ ಮಾಡಲಾಗುತ್ತಿದೆ. ಎಂದು ಸಚಿವರು ತಿಳಿಸಿದರು.

ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿಪಡಿಸಬೇಕು, ಕಟಾವು ಮತ್ತು ಸಾಗಾಟ ದರವನ್ನು ರೈತರಿಗೆ ಹೊರೆಯಾಗದಂತೆ ನಿಗದಿಪಡಿಸಬೇಕು ಎಂದು ರೈತ ಮುಖಂಡರು ವಿನಂತಿಸಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಜತೆಗೂಡಿ ಸಿಹಿ ಸುದ್ದಿ ‌ನೀಡುವುದಾಗಿ ಸಚಿವರು ತಿಳಿಸಿದರು.

ಸಚಿವರ ಕ್ರಮಗಳು:
ರಾಜ್ಯದಾದ್ಯಂತ ಹಲವು ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಅವರು 31-5-2022ರಂದು ಸಭೆ ನಡೆದ್ದರು. ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

2021-22ನೇ ಹಂಗಾಮಿನಲ್ಲಿ 2022 ಎಪ್ರಿಲ್ 15ರ ವೇಳೆಗೆ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿದ್ದ ಬಾಕಿ ಮೊತ್ತ 2389.94 ಕೋಟಿ ರೂ. ಇತ್ತು. ಕಬ್ಬು ಬಾಕಿ ಸಂಬಂಧ ಸಚಿವರು ಸಭೆಯನ್ನು ಕರೆದು ಬಾಕಿ ಪಾವತಿಗೆ ಮೇ 31ರ ಗಡುವು ನೀಡಿದ್ದರು. ಕಬ್ಬು ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಕೂಡ ನೀಡಲಾಗಿತ್ತು. ಸಭೆಯ ಬಳಿಕ, ಸಚಿವರ ಕರೆಗೆ ಓಗೊಟ್ಟು 48 ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಮೊತ್ತ ಪಾವತಿಸಿದವು.

Advertisement

Leave a reply

Your email address will not be published. Required fields are marked *

error: Content is protected !!