ಕಾರಿನ ಸನ್ ರೂಫ್ ಬಳಸುವರು ಎಚ್ಚರ ; ಬಾಲಕನ ತಲೆಗೆ ಬಡಿದ ಕಬ್ಬಿಣ ಬ್ಯಾರಿಯರ್..! Video
ಬೆಂಗಳೂರು : ಕಾರಿನ ಸನ್ ರೂಫ್ ತೆರೆದು ಮಕ್ಕಳನ್ನ ನಿಲ್ಲಿಸುವ ಪೋಷಕರೆ ಎಚ್ಚರ. ಸನ್ ರೂಫ್ ತೆರೆದು ನಿಂತ ಬಾಲಕನ ತಲೆಗೆ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಸೆಪ್ಟೆಂಬರ್ 6ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಬಾಲಕ ಸನ್ ರೂಫ್ ತೆರೆದು ನಿಂತಿದ್ದಾಗ ರಸ್ತೆಯಲ್ಲಿದ್ದ ಹೈಟ್ ರಿಸ್ಟ್ರಿಕ್ಷನ್ ಬ್ಯಾರಿಯರ್ ಬಗ್ಗೆ ಅಂದಾಜು ಸಿಗದ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರ ಪರಿಣಾಮ ಕಬ್ಬಿಣದ ಬ್ಯಾರಿಯರ್ ಬಾಲಕನ ತಲೆಗೆ ಬಡಿದಿದೆ.
ಘಟನೆಯ ದೃಶ್ಯಗಳು ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋ ಪರಿಶೀಲನೆ ನಡೆಸಲಾಗಿದ್ದು, ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿರುವುದಾಗಿ ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕಾರಿನ ಸನ್ ರೂಫ್ ತೆರೆದು ನಿಂತು ಜಾಲಿ ರೈಡ್ ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದು, ನಗರದ ಸಿಬಿಐ ರಸ್ತೆಯಲ್ಲಿ ರಾತ್ರಿ ವೇಳೆ ಮಕ್ಕಳೊಂದಿಗೆ ನಿಂತು ಇತರ ಪ್ರಯಾಣಿಕರು ಜಾಲಿ ರೈಡ್ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಕಾರಿನ ಮಾಲೀಕನನ್ನ ಪತ್ತೆಹಚ್ಚಿದ್ದ ಆರ್.ಟಿ. ನಗರ ಸಂಚಾರಿ ಠಾಣೆ ಪೊಲೀಸರು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದರು.


