Select Page

ವಸ್ತುನಿಷ್ಠ ವರದಿಗಾರಿಕೆ ನಿಜವಾದ ಪತ್ರಿಕಾಧರ್ಮ : ಗೋವಿಂದ ಕಾರಜೋಳ

ವಸ್ತುನಿಷ್ಠ ವರದಿಗಾರಿಕೆ ನಿಜವಾದ ಪತ್ರಿಕಾಧರ್ಮ : ಗೋವಿಂದ ಕಾರಜೋಳ

ಬೆಳಗಾವಿ : ಪ್ರಜಾಪ್ರಭುತ್ವ ವ್ಯವಸ್ಥೆ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮದ ದಿಕ್ಕು ಸಧ್ಯ ಬದಲಾಗಿದೆ. ಈ ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾನ್ ನಾಯಕರು ಪತ್ರಿಕೋದ್ಯಮದಿಂದ ಅದೆಷ್ಟೋ ಜನರಲ್ಲಿ ಹೋರಾಟದ ಮನೋಭಾವ ಬಿತ್ತುವ ಕೆಲಸ ಮಾಡಿದ್ದರು. ಪ್ರಸ್ತುತ ದಿನಮಾನದಲ್ಲಿ ಅಭಿವೃದ್ಧಿಪರ ಹಾಗೂ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಕೆಲಸ ಹೆಚ್ಚಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾದ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು. ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಇದೇ ರೀತಿ ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು.ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕು ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು.

ಹನ್ನೆರಡನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ  ಸ್ಥಾನಮಾನ ತಂದು ಕೊಟ್ಟಿದ್ದಾರೆ. ಪತ್ರಕರ್ತರು ಕೂಡ ಸಾಹಿತಿಗಳೇ. ಕೆಲವರು ವಸ್ತುನಿಷ್ಠ ವರದಿ ಮಾಡಿದರೆ ಕೆಲವರು ಸುದ್ದಿಯನ್ನು ಸೃಷ್ಟಿಸುತ್ತಾರೆ. ಆದರೆ ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾ ಧರ್ಮವಾಗಿದೆ ಎಂದರು. ಪೀತಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಇಂತಹ ಕಾಲಘಟ್ಟದಲ್ಲಿ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ. ಪತ್ರಿಕಾಧರ್ಮ ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಪತ್ರಿಕೋದ್ಯಮಕ್ಕೆ ವಿಶಿಷ್ಟ ಸ್ಥಾನವಿದೆ.ಸತ್ಯ ತಿಳಿಸುವ ಮೂಲ ಜನರ ಜಾಗೃತಿ ಮಾಡುವ ಕೆಲಸವಾಗಬೇಕು. ಅಭಿವೃದ್ಧಿ, ದೇಶದ ಕಲೆ-ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂರು‌ ವರ್ಷಗಳ ಮುನ್ನೋಟ ಕುರಿತ ಕಿರುಪುಸ್ತಿಕೆ ಬಿಡುಗಡೆ ಬಳಿಕ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರ ಅವರು, ಸಂಘದ ಮಾಡಿದ ಮುನ್ನೋಟವನ್ನು ವಿವರಿಸಿದರು.

ಮಹಾತ್ಮಾ ಗಾಂಧೀಜಿಯ ಸತ್ಯಾನ್ವೇಷಣೆಯ ಮಾರ್ಗ ಪತ್ರಿಕೋದ್ಯಮವಾಗಿತ್ತು. ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು. ಇದಕ್ಕೆ ಬಾಗಲಕೋಟೆಯ ಸುಭಾಷ್ ಹೊದ್ಲೂರ ಅವರ ಎರಡೂವರೆ ಲಕ್ಷ ನೀಡುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರು.
ಅದೇ ರೀತಿ ಮಹಾತ್ಮಾ ಗಾಂಧೀಜಿ‌ಯವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಅವರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಗಡೂರ ಹೇಳಿದರು.

ಮನೆ ಗೆದ್ದು ಮಾರು ಗೆಲ್ಲಬೇಕು ಎಂಬ ಮಾತನ್ನು ಅರಿತುಕೊಂಡು ಪತ್ರಕರ್ತರು, ತಮ್ಮ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವೃತ್ತಿಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಈ ಸಂದರ್ಭದಲ್ಲಿ ಸುಳ್ಳು ಸುದ್ದಿ ಭರಾಟೆ ಉಂಟಾಗಿದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಕಾರ್ಯಮರೆತ ಸಂಘ ಎಂಬ ಟೀಕೆ‌ ಎದುರಿಸಿದ ಸಂಘ ಇದೀಗ ಕಾರ್ಯನಿರತ ಪತ್ರಕರ್ತರ ಸಂಘ ಎಂಬುದನ್ನು ಸಾಬೀತುಪಡಿಸಿದೆ.ಸಂಘಕ್ಕೆ ಹೊಸರೂಪ‌ ನೀಡಿ ಇದಕ್ಕೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ರೂಪ ನೀಡಲು ಉದ್ಧೇಶಿಸಲಾಗಿದೆ.
ವೃತ್ತಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೋಟವನ್ನು ರೂಪಿಸಲಾಗಿದೆ. ಎಂದು ತಗಡೂರ ಹೇಳಿದರು.

ವಿಜಯಪುರದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ : ಈ ಬಾರಿಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ತಗಡೂರ ತಿಳಿಸಿದರು.

ಶಾಸಕರಾದ ಅನೀಲ ಬೆನಕೆ,ಅಭಯ ಪಾಟೀಲ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ,ಹಾಗೂ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಪತ್ರಕರ್ತರು ಭಾಗವಹಿಸಿದ್ದರು‌.

Advertisement

Leave a reply

Your email address will not be published. Required fields are marked *