ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ : ಡಿಸಿಪಿ ವಿಕ್ರಂ ಆಮಟೆ
ಬೆಳಗಾವಿ : ನಾಳೆ ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ಪೊಲೀಸ್ ಇಲಾಖೆ ಸಖಲ ಸಿದ್ದತೆ ಮಾಡಿಕೊಂಡಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮಟೆ ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಗೆ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದು ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4,28,364 ಮತದಾರರಿದ್ದು, 2,13,526 ಪುರುಷ ಮತದಾರರು ಹಾಗೂ 2,14,834 ಮಹಿಳಾ ಮತದಾರರಿದ್ದಾರೆ. ಒಟ್ಟು 415 ಮತಗಟ್ಟೆಗಳಿದ್ದು 142 ಸೂಕ್ಷ್ಮ ಹಾಗೂ 207 ಮತಗಟ್ಟೆ ವಿಂಗಡಿಸಿಸಲಾಗಿದೆ. ಜೊತೆಗೆ 415 ಮತಗಟ್ಟೆಗಳಿಗೆ. 457 ತಂಡ ರಚನೆ ಮಾಡಲಾಗಿದೆ. 1828 ಚುನಾವಣೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಗುರುವಾರ ನಗರದ ಬಿ,ಕೆ ಮಾಡೆಲ್ ಶಾಲೆಯಲ್ಲಿ ಮತಪೆಟ್ಟಿಗೆ ವಿತರಣಾ ಕಾರ್ಯವು ನಡೆಯಿತು. ಈಗಾಗಲೇ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.
ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಚುನಾವಣೆಗೆ ನಿಯೋಜಿಸಲಾಗಿದೆ. ಅಲ್ಲದೆ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿ, ಮತದಾರರಲ್ಲಿ ಧೈರ್ಯ ಮೂಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 600 ಕ್ಕೂ ಅಧಿಕ ರಿವಾಲ್ವರ್ ವಾಪಸ್ ಪಡೆಯಲಾಗಿದ್ದು, ಎಲ್ಲ ಠಾಣೆಗಳಲ್ಲಿ ರೌಡಿ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ.
ಚುನಾವಣೆ ಸಿಬ್ಬಂದಿಗೆ ಮತಗಟ್ಟೆ ತಲುಪಲು 29 ಬಸ್, 36 ಮಿನಿ ಬಸ್ ಹಾಗೂ 16 ಜೀಪ್ ವ್ಯವಸ್ಥೆ ಮಾಡಲಾಗಿದೆ. ಸುಗಮವಾಗಿ ಮತದಾನ ನಡೆಸಲು ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಮಾತನಾಡಿದ ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮಟೆ. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸೇರಿ, 6 ಕೆಎಸ್ಆರ್ಪಿ ತುಕಡಿ, 300 ಹೋಮ್ ಗಾರ್ಡ ಗಳನ್ನು, 75 ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇದರೆ ಜೊತೆಗೆ ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ಇಂದು ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಿಕೊಂಡಿದ್ದು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ : ಈಗಾಗಲೇ ಸುಗಮ ಮತದಾನ ನಡೆಯಲು ಸಕಲ ಸಿದ್ದತೆ ಮಾಡಿಕೊಳ್ಳಕಾಗಿದೆ. ಜೊತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.