ಕಾರ್ಖಾನೆ ಬಾಯ್ಲರ್ ಸ್ಪೋಟ ಪ್ರಕರಣ : 8 ಜನ ಕಾರ್ಮಿಕರು ಸಾವು
ಬೆಳಗಾವಿ : ಬೈಲಹೊಂಗಲ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಮೃತಪಟ್ಟಿದ್ದಾರೆ.
ಮೃತರು ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಕಾಜಗಾರ (28), ಗೋಕಾಕ್ ತಾಲೂಕಿನ ಗೊಡಚಿಮಲ್ಕಿ ಗ್ರಾಮದ ಭರತೇಶ ಸಾರವಾಡ (27), ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮಣ್ಣವರ (38) ಹಾಗೂ ಅಥಣಿ ಪಟ್ಟಣದ ಮಂಜುನಾಥ ತೇರದಾಳ (31) ಹಾಗೂ ಗೋಕಾಕ್ ತಾಲೂಕಿನ ಗಿಳಿಹೊಸುರ ಗ್ರಾಮದ ರಾಘವೇಂದ್ರ ಗಿರಿಯಾಳ (32)
ಗುರುವಾರ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬುಧವಾರ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಮೊದಲನೆ ಕಂಪಾರ್ಟಮೇಂಟಿನ ಬಾಯ್ಲರ್ ವಾಲ್ ಏಕಾಏಕಿ ಸಿಡಿದ ವೇಳೆ ಬಿಸಿ ಮಳ್ಳಿ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ 8 ಜನ ಕಾರ್ಮಿಕರ ಮೇಲೆ ಬಿದ್ದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಎಲ್ಲಾ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.


