Video : ಗೆದ್ದು ಬೀಗಿದ ಬಾಲಚಂದ್ರ ಜಾರಕಿಹೊಳಿ ಬಣ ; ಅಭಿಮಾನಿಗಳ ಸಂಭ್ರಮಾಚರಣೆ
ಬೆಳಗಾವಿ : ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಸೋಲಿನಿಂದ ತೀವ್ರ ಮುಖಭಂಗ ಅನುಭವಿಸಿದ್ದ ಜಾರಕಿಹೊಳಿ ಸಹೋದರರು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಡಿಸಿಸಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ ಸಧ್ಯ ಒಂಬತ್ತು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿವೆ. ಇದರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿರುವ ಬಣದಿಂದ ಏಳು ಜನ ಅವಿರೋಧ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದ್ದ ಬಾಲಚಂದ್ರ ಜಾರಕಿಹೊಳಿ ಕೊನೆಗೂ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಕ್ತಾಯವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಯಾವುದೋ ಒಂದು ಚುನಾವಣೆ ಸೋಲಿನಿಂದ ಶಕ್ತಿ ಅಳಿಯಲು ಸಾಧ್ಯವಿಲ್ಲ. ಡಿಸಿಸಿ ಬ್ಯಾಂಕ್ ಗೆಲುವು ಒಂದೇ ನಮಗೆ ಗುರಿಯಲ್ಲ. ಜಿಲ್ಲೆಯ ಜನರ ಆಶಿರ್ವಾದದಿಂದ ನಮ್ಮ ಬಣದ ಏಳು ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಒಟ್ಟು 12 ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಡಿಸಿಸಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ವ್ಯಕ್ತಪಡಿಸಿದರು.
ಈಗಾಗಲೇ ನಮ್ಮ ಬದಿಂದ ಏಳು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಬರುವ ಅಕ್ಟೋಬರ್ 19 ರಂದು ಏಳು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ನಮ್ಮ ಬಣ ಅಧಿಕಾರಕ್ಕೇರುವುದು ನಿಶ್ಚಿತ ಎಂದರು.
ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಗುಲಾಲ್ ಹಚ್ಚಿ ಜಯಘೋಷ ಮೊಳಗಿಸಿದರು. ಈ ವೇಳೆ ನೂತನ ಡಿಸಿಸಿ ನಿರ್ದೇಶಕರಾದ ಚನ್ನರಾಜ ಹಟ್ಟಿಹೊಳಿ, ಅರವಿಂದ ಪಾಟೀಲ, ರಾಹುಲ್ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


