ಮಸೀದಿಗೆ ನುಗ್ಗಿ ಕುರಾನ್ ಕದ್ದೊಯ್ದು ಸುಟ್ಟ ದುರುಳರು ; ಆಕ್ರೋಶ ಹೊರಹಾಕಿದ ಮುಸ್ಲಿಂ ಸಮುದಾಯ
ಬೆಳಗಾವಿ : ಮಸೀದಿಯಲ್ಲಿ ಇಟ್ಟಿದ್ದ ಕುರಾನ್ ಧರ್ಮಗ್ರಂಥ ಕದ್ದು ಜಮೀನು ಒಂದರಲ್ಲಿ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸಂತಿಬಸ್ತವಾಡ ಗ್ರಾಮದಲ್ಲಿನ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿ ಇಡಲಾಗಿದ್ದ, ಕುರಾನ್ ಪುಸ್ತಕ, ಎರಡು ಹದೀಸ್ ಗಳನ್ನು ಕಿಡಿಗೇಡಿಗಳು ಕದ್ದು ಮಸೀದಿ ಹೊರವಲಯದಲ್ಲಿ ಸುಟ್ಟಿದ್ದಾರೆ. ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಕುರಾನ್ ಸುಟ್ಟ ಘಟನೆ ಖಂಡಿಸಿ ಸಂತಿ ಬಸ್ತವಾಡದಿಂದ ಸಾವಿರಾರು ಮುಸ್ಲಿಂ ಸಮುದಾಯದ ಜನ ಬೆಳಗಾವಿಗೆ ಬಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡರು. ಕಳೆದ ಎರಡು ಬಾರಿ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

