ಜೀವ ಅಂಗೈಲಿ ಹಿಡಿದು ‘ಟ್ಯೂಬ್ ತೆಪ್ಪ’ದ ಮೇಲೆ ಮಕ್ಕಳ ಸಂಚಾರ
ಚನ್ನಮ್ಮನ ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಲಾಗಿದೆ. ಅದನ್ನು ನೀರಿನ ಮೇಲಿಟ್ಟು ಹಲಗೆ ಹಾಕಲಾಗಿದೆ. ಇದರ ಒಂದು ಬದಿಗೆ ಚಿಕ್ಕ ಗಾತ್ರದ ಹಗ್ಗ ಕಟ್ಟಿ, ಎರಡೂ ದಂಟೆ ಆಚೀಚೆಗೆ ಸುಮಾರು ಒಂದೂವರೆ ಅಡಿಯ
ಕಟ್ಟಿಗೆ (ಗೂಟ)ಯನ್ನು ನೆಡಲಾಗಿದೆ. ಕೆರೆಯ ಹಿನ್ನೀರಿನಲ್ಲಿ ‘ಟ್ಯೂಬ್ ತೆಪ್ಪ’ದ ಮೇಲೆ ಕುಳಿತು ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಮಕ್ಕಳು, ಮಹಿಳೆಯರು ಸಾಗಬೇಕು..
ಇದು ಯಾವುದೇ ವಾಟರ್ ಪಾರ್ಕ್ ನಲ್ಲಿಯ ಮೋಜು, ಮಸ್ತಿ ಎಂದು ಭಾವಿಸಿದ್ದರೆ ಅದು ತಪ್ಪು. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ನಿಂಗಾಪುರ ಗ್ರಾಮದ ಸಾರ್ವಜನಿಕರು ಮಳೆಗಾಲದಲ್ಲಿ ತಾವೇ
ಮಾಡಿಕೊಂಡ ಅಪಾಯಕಾರಿಯಾದ ಸಂಚಾರ ವ್ಯವಸ್ಥೆಯಿದು.
ಮಕ್ಕಳು ಶಾಲೆಗೆ, ಮಹಿಳೆಯರು ಮತ್ತು ರೈತರು ಜಮೀನುಗಳಿಗೆ, ಪರಸ್ಥಳಗಳಿಗೆ ಹೋಗಬೇಕೆಂದರೆ ಅಂಗೈಲಿ ಜೀವ ಹಿಡಿದುಕೊಂಡು ಇದೇ ‘ಟ್ಯೂಬ್ ತೆಪ್ಪ’ ದಲ್ಲಿ ಪ್ರಯಾಣಿಸಬೇಕಾಗಿದೆ.
ಹೊಳೆ-ಹಳ್ಳದ ಸ್ವರೂಪ ಪಡೆದುಕೊಂಡು ನಿಂತಿರುವ ಧಾರವಾಡ ತಾಲ್ಲೂಕಿನ ಹುಲಿಕೆರೆಯ ಹಿನ್ನೀರು, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರ ಬಳಿ ಬಂದು ಸಂಗ್ರಹಗೊಳ್ಳುತ್ತದೆ. ಪಶ್ಚಿಮ ದಿಕ್ಕಿನೆಡೆಗೆ ನಿಂಗಾಪುರಕ್ಕೆ ಸೇರಿದ ಹಲವರ ಜಮೀನುಗಳಿವೆ. ಕೃಷಿ ಜಮೀನಿನಲ್ಲಿ ಮನೆಕಟ್ಟಿಕೊಂಡು ಸುಮಾರು 20 ಕುಟುಂಬಗಳು ಅಲ್ಲಲ್ಲಿ ವಾಸವಾಗಿವೆ.
ರೈತರು ನಿಂಗಾಪುರದಿಂದ ಹೊಲಕ್ಕೆ ತೆರಳಬೇಕಾದರೆ. ದನಗಳು ಕೆರೆ ನೀರಿನಲ್ಲಿ ಈಜಿ ಆಚೆಗಿನ ದಡ ಸೇರಿದರೆ ರೈತರಿಗೆ, ಕುಟುಂಬದಲ್ಲಿರುವ ಮಹಿಳೆಯರಿಗೆ, ಪೂರ್ವದಿಕ್ಕಿನಲ್ಲಿರುವ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ‘ಟ್ಯೂಬ್ ತೆಪ್ಪ’ವೇ ಗತಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ತಪ್ಪಿದ್ದಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದರೂ ಯಾರೂ ಇತ್ತ ಕಡೆಗೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದರು.
ಮಳೆಗಾಲದಲ್ಲಿ ಪ್ರತಿದಿನ ಈ ಕೆರೆಯಲ್ಲಿ 10 ಜನ ವಿದ್ಯಾರ್ಥಿಗಳು ಟ್ಯೂಬ್ ತೆಪ್ಪದ ಮೇಲೆ ಕುಳಿತು ಶಾಲೆಗಳಿಗೆ ಬರುತ್ತೇವೆ. ಟ್ಯೂಬ್ ತೆಪ್ಪದ ಮೇಲೆ ಕುಳಿತು ಶಾಲೆಗೆ ಬರುವಾಗ ಭಯವಾಗುತ್ತದೆ. ಸಂಚಾರಕ್ಕೆ ಅಧಿಕಾರಿಗಳು ಸೇತುವೆ ನಿರ್ಮಿಸಿಕೊಡಬೇಕು.
ರಾಯಣ್ಣ ಸನದಿ
ವಿದ್ಯಾರ್ಥಿನಿ
ಸುಮಾರು 22 ವರ್ಷದಿಂದ ಮಹಿಳೆಯರು, ವಿದ್ಯಾರ್ಥಿಗಳು, ರೈತರು ಸುಮಾರು 30 ಅಡಿ ತೆಗ್ಗುವಿರುವ ಕೆರೆಯಲ್ಲಿ ಟ್ಯೂಬ್ ತೆಪ್ಪ ಮೂಲಕ ನಿಂಗಾಪುರ ಗ್ರಾಮಕ್ಕೆ ತೆರಳಬೇಕು. ಜನರಿಗೆ ಈ ಕೆರೆ ದಾಟಲು ಸೇತುವೆ ಅವಶ್ಯವಾಗಿದೆ.
ಈರಯ್ಯ ನಿಂಗಾಪುರಮಠ,
ಸ್ಥಳೀಯರುಸ್ಥಳೀಯರು
ಸುಮಾರು 25 ಜನರು ಪ್ರತಿದಿನ ಕೆರೆಯ ದಾಟಿ ಬರುತ್ತಾರೆ. ಕಿತ್ತೂರು ತಹಶೀಲ್ದಾರ ಅವರಿಗೆ ನಿಂಗಾಪುರ ಗ್ರಾಮ ಎಲ್ಲಿ ಇದೆ ಅಂತಾ ಗೊತ್ತಿಲ್ಲ. ಸಾಕಷ್ಟು ಸಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ದಶರಥ ಮಡಿವಾಳರ,
ಗ್ರಾ. ಪಂ. ಸದಸ್ಯ