Select Page

Video : ನನ್ನ ಖುಷಿ ಕ್ಷಣ ನೋಡಲು ತಂದೆ ಇರಬೇಕಿತ್ತು : ಗೌರವ ಡಾಕ್ಟರೇಟ್ ಪಡೆದ ನಟ ರಮೇಶ್ ಅರವಿಂದ್ ಭಾವನಾತ್ಮಕ ಮಾತು

Video : ನನ್ನ ಖುಷಿ ಕ್ಷಣ ನೋಡಲು ತಂದೆ ಇರಬೇಕಿತ್ತು : ಗೌರವ ಡಾಕ್ಟರೇಟ್ ಪಡೆದ ನಟ ರಮೇಶ್ ಅರವಿಂದ್ ಭಾವನಾತ್ಮಕ ಮಾತು

ಬೆಳಗಾವಿ : ಗೌರವ ಡಾಕ್ಟರೇಟ್ ನಂತಹ ಮಹತ್ವದ ಗೌರವ ಪಡೆದುಕೊಂಡ ಸಂದರ್ಭದಲ್ಲಿ ನನ್ನನ್ನು ಪ್ರೀತಿಯಿಂದ ಬೆಳೆಸಿದ ತಂದೆ ಇರಬೇಕಿತ್ತು, ಆ ನೋವು ನನ್ನನ್ನು ಕಾಡುತ್ತದೆ ಎಂದು ಖ್ಯಾತ ನಟ ರಮೇಶ್ ಅರವಿಂದ್ ಹೇಳಿದರು. (Ramesh aravindh)

ಬುಧವಾರ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವದಲ್ಲಿ ಸಿನೆಮಾ ಕ್ಷೇತ್ರದಲ್ಲಿನ ಸೇವೆಗೆ ಗೌರವ ಡಾಕ್ಟರೇಟ್ ಪಡೆದು ಮಾತನಾಡಿದ ಇವರು. ನನ್ನ ಜೀವನದ ಈ ಮಹತ್ವದ ಮೈಲುಗಲ್ಲು ಮುಟ್ಟಲು ಸಾಧ್ಯವಾಗಿದ್ದು ಚಿತ್ರರಂಗ. ಸಿನೆಮಾ ನನಗೆ ಅದ್ಬುತ ಪಾತ್ರ ಕೊಟ್ಟಿತು, ಮೇರು ನಟ ನಟಿಯರ ಜೊತೆ ಅಭಿನಯಿಸುವ ಅವಕಾಶ ನೀಡಿತು. ಜೊತೆಗೆ ಕೋಟ್ಯಾಂತರ ಕನ್ನಡಿಗರ ಸ್ನೇಹ ಹಾಗೂ ಪ್ರೀತಿಯ ಜೊತೆ ಜೊತೆಗೆ ಗೌರವ ಡಾಕ್ಟರೇಟ್ ನಂತಹ ಮಹತ್ವದ ಗೌರವ ಸಂದಿದ್ದು ಸಂತೋಷದ ವಿಷಯ ಎಂದರು.

ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯವಾದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ತಂಡ ನನಗೆ ಗೌರವ ಡಾಕ್ಟರೇಟ್ ನೀಡಿದ್ದನ್ನು ನಾನು ಹೆಮ್ಮೆಯಿಂದ ಗೌರವಿಸುತ್ತೇನೆ. ಬದುಕಿನಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ನನ್ನ ಕುಟುಂಬ ಹಾಗೂ ಅಭಿಮಾನಿಗಳ ಪ್ರೀತಿಯಿಂದ ಸಾಧ್ಯವಾಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದ ಖುಷಿ ಕ್ಷಣಗಳನ್ನು ಆನಂದಿಸಿದೆ ಎಂದರು.


—————————————————-

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ : ಶ್ರೇಷ್ಠ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ

ಬೆಳಗಾವಿ : ನವ ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ(ಸೆ.14) ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದ ನವ್ಯೋದ್ಯಮವು ಜಗತ್ತಿನ ಆಕರ್ಷಕ ಕೇಂದ್ರವಾಗಿದೆ. ಹೊಸ ಶಿಕ್ಷಣ ನೀತಿಯು‌ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನೈಸರ್ಗಿಕ ಸಂಪನ್ಮೂಲಗಳ ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2022 ರ ಅನುಷ್ಠಾನ ದ ಜತೆಗೆ ಸಮಗ್ರ ಶಿಕ್ಷಣವನ್ನು ರಾಣಿ ಚೆನ್ನಮ್ಮ ವಿವಿ ನೀಡುತ್ತಿದೆ. ರಾಜ್ಯದ ಅತೀ ದೊಡ್ಡ ವಿವಿಗಳಲ್ಲಿ ರಾಚವಿ ಕೂಡ ಒಂದು. ಕಡಿಮೆ ಅವಧಿಯಲ್ಲಿ ಉತ್ತಮ‌ ಶೈಕ್ಷಣಿಕ ಸಾಧನೆ ತೋರಿದ ಕುಲಪತಿ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಗೌರವ ಡಾಕ್ಟರೇಟ್ ಪಡೆದುಕೊಂಡ ಮಹನೀಯರನ್ನು ಅಭಿನಂದಿಸಿದ ಅವರು, ಸಮಾಜದೆಡೆಗಿನ ತಮ್ಮ ಕರ್ತವ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್

ಸಮಾಜ ಸೇವಾ ಕ್ಷೇತ್ರದ ಕೊಡುಗೆ ಪರಿಗಣಿಸಿ ನಗರಾಭಿವೃದ್ಧಿ ತಜ್ಞ ಹಾಗೂ ಸಮಾಜ ಸೇವಕರಾದ ವ್ಹಿ. ರವಿಚಂದರ್ ವೆಂಕಟರಾಮನ್ ಅವರಿಗೆ ‘ಡಾಕ್ಟರ್‌ಆಫ್ ಸೈನ್ಸ್’, ಚಲನಚಿತ್ರ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ ಅವರಿಗೆ ‘ಡಾಕ್ಟರ್‌ ಆಫ್ ಲೆಟರ್ಸ್’ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿಯ ಅಪಾರ ಸೇವೆ ಪರಿಗಣಿಸಿ ಬೀದರನ ಬಸವತತ್ವ ಪ್ರಚಾರಕಿ, ಕಾಯಕ ದಾಸೋಕ ಪ್ರಚಾರಕಿ ಮಾತಾ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ‘ಡಾಕ್ಟರ್‌ಆಫ್ ಲೆಟರ್ಸ್’ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವ ಪ್ರೊ.ಎಂ.ಹನುಮಂತಪ್ಪ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ವಿವಿಯ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!