ವಿಜಯ ಸಂಕೇಶ್ವರ ಹುಟ್ಟು ಹಬ್ಬದ ದಿನವೇ ಮಾರುಕಟ್ಟೆ ಬಂದ ಕಿಂಗ್ ಐಸ್‌ಕ್ರೀಮ್
ಬೆಳಗಾವಿ : ವಿಜಯಕಾಂತ ಡೇರಿ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದ ಶಿವಕಾಂತ ಸಿದ್ನಾಳ ಅವರ ಪುತ್ರ ವಿಜಯಕಾಂತ ಸಿದ್ನಾಳ ತಂದೆಯ ಕನಸುಗಳನ್ನು ನನಸು ಮಾಡಲು ಹೊರಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.
ಶುಕ್ರವಾರ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್‌ನ ನೂತನ ಉತ್ಪನ್ನ ಕಿಂಗ್ ಐಸ್‌ಕ್ರೀಮ್ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಸ್ಪರ್ಧಾತ್ಮಕ ಯುಗದಲ್ಲಿ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಒಬ್ಬ ಪ್ರಾಮಾಣಿಕ ವ್ಯಕ್ತಿ ಕಷ್ಟಪಟ್ಟು ದುಡಿದರೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು ಎಂಬುದಕ್ಕೆ ಡಾ.ವಿಜಯ ಸಂಕೇಶ್ವರ ಅವರೇ ಸಾಕ್ಷಿ. ವಿಜಯಕಾಂತ ಡೇರಿ ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದು ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಉಪಾಧ್ಯಕ್ಷ ವಿಜಯಕಾಂತ ಸಿದ್ನಾಳ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ವಿತರಕರು, ಸಿಬ್ಬಂದಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ನಿರಂತರ ಶ್ರಮ, ಶ್ರದ್ಧೆಯಿಂದಲೇ ವಿಜಯಕಾಂತ ಡೇರಿ ಯಶಸ್ವಿಯಾಗಿ ಬೆಳೆದುನಿಂತಿದೆ. ನಮ್ಮ ತಾತ ಡಾ.ವಿಜಯ ಸಂಕೇಶ್ವರ ಅವರ ಜನ್ಮದಿನದ ಅಂಗವಾಗಿ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್‌ನಿಂದ ಹೊಸದಾಗಿ ‘ಕಿಂಗ್’ ಐಸ್‌ಕ್ರೀಮ್‌ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ.
ಆರಂಭದಲ್ಲಿ ಐದು ನಮೂನೆಯ ಐಸ್‌ಕ್ರೀಮ್ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸುಮಾರು 70 ನಮೂನೆಯ ಐಸ್‌ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಲಾಗುವುದು. ವಿಜಯಕಾಂತ ಡೇರಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರಾೃಂಡ್ ಮಾಡಲು ಡಾ.ವಿಜಯ ಸಂಕೇಶ್ವರ ಮತ್ತು ಡಾ.ಆನಂದ ಸಂಕೇಶ್ವರ ಅವರ ಪ್ರೋತ್ಸಾಹ, ಸಹಕಾರವೇ ಕಾರಣ ಎಂದರು.
ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಸಂಸ್ಥೆ ಉಪಾಧ್ಯಕ್ಷೆ ನಿವೇದಿತಾ ಸಿದ್ನಾಳ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ್, ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಎಂಡಿ ದೀಪಾ ಸಿದ್ನಾಳ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಇತರರು ಇದ್ದರು.
ಹೊಸದಾಗಿ ಕಿಂಗ್ ಐಸ್‌ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲಿ 70 ನಮೂನೆಯ ಐಸ್‌ಕ್ರೀಮ್‌ಗಳು ಮಾರುಕಟ್ಟೆ ಬರಲಿದೆ. ಕಿಂಗ್ ಐಸ್‌ಕ್ರೀಮ್ ಅಂತಾರಾಷ್ಟೀಯ ಮಟ್ಟಕ್ಕೆ ಬೆಳೆಯುವಂತೆ ಮಾಡಲು ಮೊಮ್ಮಕ್ಕಳಿಗೆ ಸಲಹೆ ನೀಡಿದ್ದೇವೆ. ವಿಜಯಕಾಂತ ಸಿದ್ನಾಳ ಮತ್ತು ಶಿವಾ ಸಂಕೇಶ್ವರ ಅವರಿಗೆ ಕಿಂಗ್ ಐಸ್‌ಕ್ರೀಮ್ ದುಬೈನಲ್ಲಿ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ವತಿಯಿಂದ ಬೇರೆ ರಾಜ್ಯಗಳಲ್ಲೂ ಘಟಕ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಡಾ.ವಿಜಯ ಸಂಕೇಶ್ವರ
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್


