
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬೆಳಗಾವಿ : ಮಹಾರಾಷ್ಟ್ರ ಘಟ್ಟ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಆರ್ಭಟ ಮುಂದುವರಿದ ಪರಿಣಾಮ ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದೆ. ಸಧ್ಯ ಕೊಯ್ನಾ ಜಲಾಶಯದಿಂದ ಸುಮಾರು 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.
ಸಧ್ಯ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು, ಲೋಳಸೂರ್ ಬ್ರಿಡ್ಜ್‌ನಿಂದ 25 ಸಾವಿರ ಕ್ಯೂಸೆಕ್ ಒಳಹರಿವು ಇದ್ದ ಕಾರಣ ರಾತ್ರಿ ವೇಳೆ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲೆಯಲ್ಲಿ ಸದ್ಯಕ್ಕೆ 35 ಬೋಟ್ ಲಭ್ಯವಿದ್ದು, ಹೆಚ್ಚು ಬೋಟ್ ಗಳು ಅವಶ್ಯವಿದ್ದಲ್ಲಿ ಕಾರವಾರದಿಂದ ತರಿಸಲಾಗುವುದು. ಸದ್ಯಕ್ಕೆ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಮೂರು ದಿನ ರೆಡ್ ಅಲರ್ಟ್ ಇರುತ್ತದೆ. ನೀರು ಬಿಡುಗಡೆ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಪರಿಸ್ಥಿತಿ ಆಧರಿಸಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಖಾನಾಪುರದಲ್ಲಿ ಎನ್.ಡಿ.ಆರ್.ಎಫ್. ತಂಡವನ್ನು ಕೂಡ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ರಾಯಬಾಗ ತಹಶೀಲ್ದಾರ ಕೆ.ಎಸ್ ಕುಲಕರ್ಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.