
ಗಮನಸೆಳೆದ ರಕ್ತದಾನ ಮಹತ್ವದ ಕುರಿತು ಜಾಗೃತಿ ಜಾಥಾ

ಬೆಳಗಾವಿ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇಲ್ಲಿನ ಜೈನ ಹೆರಿಟೇಜ್ ಶಾಲೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಶುಕ್ರವಾರ, ನಗರದ ಪ್ರಮುಖ ರಸ್ತೆಗಳಲ್ಲಿ ರಕ್ತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಶಾಲೆಯ 152 ಮಕ್ಕಳು, ಸ್ಕೌಟ್ಸ್–ಗೈಡ್ಸ್ ಸದಸ್ಯರು, ಶಿಕ್ಷಕರು ಹಾಗೂ ಕ್ಲಬ್‌ನ ಸದಸ್ಯೆಯರು ಕೂಡ ಪಾದಯಾತ್ರೆ ಮಾಡಿ ರಕ್ತದಾನದ ಅರಿವು ಮೂಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ‘ಪ್ರಜಾವಾಣಿ’ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಈ. ಚಿನಗುಡಿ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯಸ್ಥ ವಿಠ್ಠಲ ಎಸ್.ಬಿ. ಹಾಗೂ ಅಖ್ತರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜಿರಿ ಪಾಟೀಲ, ಕಾರ್ಯದರ್ಶಿ ಉರ್ಮಿ ಶೇರಿಗಾರ, ಇವೆಂಟ್ ಅಧ್ಯಕ್ಷೆ ಆವಂತಿಕಾ ರೇವಣ್ಣನವರ, ಶಿಕ್ಷಕರಾದ ಎನ್.ಕಲ್ಪನಾ, ಮಾರುತಿ, ಶಶಿಕಾಂತ ಪಾಲ್ಗೊಂಡರು.
ಶಾಲೆಯ ಸ್ಕೌಟ್ ಮತ್ತು ಗೈಡ್ ಶಿಕ್ಷಕಿ, ಕಾರ್ಯಕ್ರಮದ ರೂವಾರಿ ಪಲ್ಲವಿ ನಾಡಕರ್ಣಿ ಮುಂದಾಳತ್ವದಲ್ಲಿ ಜಾಥಾ ಯಶಸ್ವಿಯಾಗಿ ನೆರವೇರಿತು.
ಆಕರ್ಷಕ ಜಾಥಾ: ‘ಬ್ಲಡ್‌ಮ್ಯಾನ್’ ಎಂದೇ ಖ್ಯಾತರಾದ, 98 ಸಾರಿ ರಕ್ತದಾನ ಮಾಡಿರುವ ದಾವಣಗೆರೆಯ ಶಿವಕುಮಾರ ಮಹಡಿಮನೆ ವಿಶೇಷ ಆಕರ್ಷಣೆಯಾಗಿ ಕಂಡರು. ಇಡೀ ದೇಹವನ್ನು ರಕ್ತ ಹಾಗೂ ನರಮಂಡಲದಂತೆ ಪೇಂಟಿಂಗ್ ಮಾಡಿಕೊಂಡು ಜಾಥಾದಲ್ಲಿ ಪಾಲ್ಗೊಂಡ ಅವರು, ಜನರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ಶಾಲೆಯ ಬಾಲಕ– ಬಾಲಕಿಯರು ಸಂಭಾಜಿ ವೃತ್ತದಲ್ಲಿ ಬೀದಿನಾಟಕ ಪ್ರದರ್ಶನದ ಮೂಲಕ ರಕ್ತದ ಮಹತ್ವ ತಿಳಿಸಿಕೊಟ್ಟರು. ಸುತ್ತ ಸೇರಿದ್ದ ಸಾರ್ವಜನಿಕರು, ಪ್ರಯಾಣಿಕರು ಮಕ್ಕಳ ನಾಟಕ ನೋಡಿ ಸಂಭ್ರಮಿಸಿದರು.
ಅಲ್ಲಿಂದ ಆರಂಭಗೊಂಡ ಜಾಥಾ ಕಿರ್ಲೋಸ್ಕರ್ ರಸ್ತೆ, ಖಡೇಬಜಾರ್, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ ಮಾರ್ಗವಾಗಿ ಸಂಚರಿಸಿ, ಮತ್ತೆ ಸಂಭಾಜಿ ವೃತ್ತಕ್ಕೆ ಬಂದು ಕೊನೆಗೊಂಡಿತು.
ಚಿಣ್ಣರು ಮಾರ್ಗದುದ್ದಕ್ಕೂ ಭಿತ್ತಿಚಿತ್ರಗಳು, ಬರಹಗಳನ್ನು ಪ್ರದರ್ಶಿಸಿದರು. ಸೇವ್ ಬ್ಲಡ್– ಸೇವ್ ಲೈಫ್, ರಕ್ತದಾನ ಮಾಡಿ ಪ್ರಾಣ ಉಳಿಸಿ, ರಕ್ತದಾನ ಶ್ರೇಷ್ಠದಾನ ಎಂದು ನಿರಂತರ ಘೋಷಣೆ ಮೊಳಗಿಸಿದರು.
ಇನ್ನೊಂದು ರ್‍ಯಾಲಿಯು ಆರ್‌ಪಿಡಿ ಕ್ರಾಸ್‌ನಿಂದ ಗೋಗಟೆ ಕಾಲೇಜಿನವರೆಗೆ ನಡೆಯಿತು. ಎರಡೂ ರ್‍ಯಾಲಿಗಳಲ್ಲಿ ಖಡೇಬಜಾರ್ ಹಾಗೂ ಕ್ಯಾಂಪ್ ಠಾಣೆ ಪೊಲೀಸರು ಭದ್ರತೆ ಒದಗಿಸಿ, ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರು.