ಬೆಳಗಾವಿ : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಖಾಲಿ ಇರುವ 134 ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ದೊರೆತ ಬಳಿಕ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಸೋಮವಾರ ನಡೆದ ಬಿಡಿಸಿಸಿ ಬ್ಯಾಂಕಿನ 105 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ 104 ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಲವು ಲೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಆ ಪ್ರಕ್ರಿಯೆಯನ್ನು ರದ್ದುಪಡಿಸಿತ್ತು. ಇದೀಗ 110 ಗುಮಾಸ್ತರು, 23 ಪ್ಯೂನ್ಗಳು ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಸೇರಿದಂತೆ 134 ಹುದ್ದೆಗಳ ನೇಮಕಾತಿಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸರ್ಕಾರ ಅನುಮತಿ ನೀಡಿದ ಬಳಿಕ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗುವುದು. ಈಗಾಗಲೇ ಸುಮಾರು 21 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ಪ್ರಕ್ರಿಯೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಿ ಹೊಸದಾಗಿ ಅರ್ಜಿ ಪಡೆಯಲಾಗುವುದು. ಬಳಿಕ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ನೇಮಕಾತಿ ಪೂರ್ಣಗೊಳಿಸಲಾಗುವುದು. ಸಿಬ್ಬಂದಿ ಕೊರತೆಯಿಂದ ಹಾಲಿ ನೌಕರರು ಹೆಚ್ಚುವರಿ ಕೆಲಸ ನಿರ್ವಹಿಸುತ್ತಿದ್ದು, ಹೊಸ ನೇಮಕಾತಿಯಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡುವ ವಿಚಾರದಲ್ಲಿ ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಮಾರು 50 ಸಕ್ಕರೆ ಕಾರ್ಖಾನೆಗಳಿದ್ದು, ಕಾರ್ಖಾನೆಗಳು ಉಳಿದರೆ ಮಾತ್ರ ಕಬ್ಬು ಬೆಳೆಗಾರರ ಹಿತ ಕಾಪಾಡಲು ಸಾಧ್ಯ. ಒಂದು ಕಾರ್ಖಾನೆ ಮುಚ್ಚಿದರೂ ಅದರ ವ್ಯಾಪ್ತಿಯ ರೈತರಿಗೆ ಕಬ್ಬು ಮಾರಾಟದಲ್ಲಿ ಸಮಸ್ಯೆಯಾಗಲಿದೆ ಎಂದು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಪ್ರತಿಯೊಂದು ಸಾಲದ ಪ್ರಸ್ತಾವನೆಯನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಬ್ಯಾಂಕ್ ಕುರಿತು ಆರೋಪಗಳು ಅಥವಾ ಮಾಧ್ಯಮಗಳಲ್ಲಿ ವರದಿಗಳು ಬಂದಾಗ ವಾಸ್ತವಾಂಶ ಪರಿಶೀಲಿಸಿ ಅಭಿಪ್ರಾಯ ರೂಪಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, 106 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಬ್ಯಾಂಕ್ ಶತಮಾನೋತ್ಸವದ ಸಂಭ್ರಮದಲ್ಲಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ ಕೃಷಿ ಸಾಲ ₹3,300 ಕೋಟಿಯಿಂದ ₹3,727 ಕೋಟಿಗೆ ಏರಿಕೆಯಾಗಿದೆ. ಆರು ತಿಂಗಳಲ್ಲಿ ಠೇವಣಿ ₹616 ಕೋಟಿ ಹೆಚ್ಚಳವಾಗಿ ₹6,703 ಕೋಟಿಗೆ ತಲುಪಿದೆ. ದುಡಿಯುವ ಬಂಡವಾಳ ₹9,776 ಕೋಟಿಗೆ ಏರಿಕೆಯಾಗಿದ್ದು, ಸಾಲ ಮರುಪಾವತಿ ಪ್ರಮಾಣ ಶೇ.99.78ರಷ್ಟಿದೆ ಎಂದರು.
ಕಬ್ಬು ಬೆಳೆಯ ಸಾಲದ ಮಿತಿಯನ್ನು ಪ್ರತಿ ಎಕರೆಗೆ ₹40 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಬೆಳಗಾವಿ ಜಿಲ್ಲೆಯ ರೈತರಿಗೆ ಸುಮಾರು ₹700 ಕೋಟಿ ಹೆಚ್ಚುವರಿ ಸಾಲ ಸೌಲಭ್ಯ ದೊರೆಯಲಿದೆ. ಟ್ರ್ಯಾಕ್ಟರ್, ಹೈನುಗಾರಿಕೆ ಹಾಗೂ ಪೈಪ್ಲೈನ್ ಸಾಲಗಳ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಯನ್ನು 2.82 ಲಕ್ಷ ಸದಸ್ಯರಿಗೆ ವಿಸ್ತರಿಸಲಾಗಿದೆ ಎಂದರು.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸಲಾಗುತ್ತಿದ್ದು, ಐದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲಾಗಿದೆ. ವಸೂಲಾಗದ ಸಾಲಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ದೀರ್ಘಕಾಲದ ಬಾಕಿ ಪ್ರಕರಣಗಳಲ್ಲಿ SARFAESI ಕಾಯ್ದೆಯಡಿ ಕ್ರಮ ಮುಂದುವರಿದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ ಹುಕ್ಕೇರಿ, ವಿರುಪಾಕ್ಷಿ ಮಾಮನಿ, ಮಲ್ಲಪ್ಪ ಯಾದವಾಡ, ನಾನಾಸಾಹೇಬ ಪಾಟೀಲ, ಅಮರನಾಥ ಜಾರಕಿಹೊಳಿ, ಬ್ಯಾಂಕಿಂಗ್ ತಜ್ಞ ನಿರ್ದೇಶಕ ರಾಜೇಂದ್ರ ಪಾಟೀಲ, ಆಮಂತ್ರಿತ ಸದಸ್ಯ ಎನ್.ಕೆ.ಕರೆನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬ್ಯಾಂಕಿನ ಸಿಇಒ (ಪ್ರಭಾರ) ಎನ್.ಜಿ. ಕಲಾವಂತ ವಾರ್ಷಿಕ ವರದಿ ಮಂಡಿಸಿದರು.
– Balachandra Jarakiholi – BDCC Bank – Belagavi – Annasaheb jolle




