ಬೆಳಗಾವಿ : ಈ ವರ್ಷ ಉತ್ತಮ ಮುಂಗಾರು ಮಳೆ‌ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಕಳೆದ ಕಳೆದ ಮೂರು ತಿಂಗಳಿನಿಂದ ಮಳೆರಾಯನನ್ನು ಕಾಯುತ್ತಿದ್ದವರಿಗೆ ಕೊಂಚ ನಿರಾಳತೆ ಸೃಷ್ಟಿಯಾಗಿದೆ.

ಹೌದು ಬೆಳಗಾವಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಭಾನುವಾರ ರಾತ್ರಿ ಹಲವೆಡೆ ಮಳೆ ಕಣ್ಣು ತೆರೆದಿದ್ದು ಸಧ್ಯಕ್ಕೆ ರೈತರಿಗೆ ಆಶಾಭಾವನೆ ಮೂಡಿದೆ.

ಮಳೆ-ಗಾಳಿಗೆ ನೆಲಕಚ್ಚಿದ 6 ಎಕರೆ ಕಬ್ಬು : ಗೋಕಾಕ್ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಸುಮಾರು 6 ಎಕರೆ ಕಬ್ಬು ಬೆಳೆ ನೆಲಕಚ್ಚಿದೆ.

ರೈತ ಸಾವು : ಯರಗಟ್ಟಿ ತಾಲೂಕಿನ ಮದ್ಲೂರ ಗ್ರಾಮದ ರೈತರಾದ ಕೇದಾರಪ್ಪ ಬಸಪ್ಪ ಗುರ್ಲಹೊಸೂರ ಮತ್ತು ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ನಿನ್ನೆ ರಾತ್ರಿ ಇವರು ಶ್ರೀರಂಗಪೂರ ಹದ್ದಿಯಲ್ಲಿನ ತಮ್ಮ ಜಮೀನಾದ ಸರ್ವೇ ನಂ:378 ರಲ್ಲಿ ಮೆಕ್ಕೆಜೋಳ ಮಷಿನ್ ಗೆ ಒಡೆಸಿದ್ದನ್ನು ರಾಶಿ ಕಾಯಲು ಹೋಗಿದ್ದರು.

ರಾತ್ರಿ ಅಂದಾಜು ಸಮಯ 1 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಅತಿಯಾದ ಸಿಡಿಲು ಮಳೆ ಆಗಿದ್ದರಿಂದ ಸಿಡಿಲು ಬಡಿದು ಸ್ಥಳದಲ್ಲಿಯೇ ಕೇದಾರಪ್ಪ ಬಸಪ್ಪ ಗುರ್ಲಹೊಸೂರ ವಯಸ್ಸು 47 ಇವರು ಮೃತರಾಗಿರುತ್ತಾರೆ.

ಹಾಗೂ ಭೀಮಪ್ಪ ಕೇದಾರಪ್ಪ ಗುರ್ಲಹೊಸೂರ ಇವರ ಸ್ಥಿತಿ ಗಂಭೀರ ವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ಮುರಗೋಡ ಸಿಪಿಐ ಐ ಎಂ ಮಠಪತಿ, ಯರಗಟ್ಟಿ ಪೊಲೀಸ್ ಪಿಎಸ್ಐ ಎಲ್ ಬಿ ಮಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.