ಬೆಳಗಾವಿ: ಮುಖ್ಯಮಂತ್ರಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಭೆಗೂ ಮುನ್ನವೇ ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ರೈತ ಸಂಘಟನೆಗಳ ಎರಡು ಬಣಗಳ ನಡುವೆ ಹೊಡೆದಾಟ ನಡೆದಿದೆ. ಕೋಡಿಹಳ್ಳಿ ಚಂದ್ರಶೇಖರ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರ ನಡುವೆ ನಡೆದ ವಾಗ್ವಾದ ತೀವ್ರಗೊಂಡು, ಕುಡಿಯಲು ಮೇಜಿನ ಮೇಲಿಟ್ಟಿದ್ದ ಗಾಜಿನ ಗ್ಲಾಸ್ ಎಸೆದು ಗಲಾಟೆ ನಡೆಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು ರೈತರನ್ನು ಕರೆದೊಯ್ದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.
*ಕಬ್ಬಿನ ವಿಚಾರವಾಗಿ ವಾಗ್ವಾದ*
ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಚಹಾ ವ್ಯವಸ್ಥೆ ಇಲ್ಲ ಎಂಬ ವಿಚಾರವಾಗಿ ಆರಂಭವಾದ ಅಸಮಾಧಾನ ಬಳಿಕ ತೀವ್ರ ಗಲಾಟೆಗೆ ತಿರುಗಿತು ಎನ್ನಲಾಗಿದೆ. ಈ ವೇಳೆ ಚೂನಪ್ಪ ಪೂಜಾರಿ ರೈತರನ್ನು ಸಮಾಧಾನಪಡಿಸಿ ಭಾಷಣ ಆರಂಭಿಸಿದರು.
ಈ ವರ್ಷ ಪ್ರತಿ ಟನ್ ಕಬ್ಬಿಗೆ ₹4,500 ದರ ಪಡೆದೇ ತೀರುವುದಾಗಿ ಅವರು ಹೇಳಿದಾಗ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರು ಆಕ್ಷೇಪ ವ್ಯಕ್ತಪಡಿಸಿದರು.
ಹೊರಗಡೆ ಪ್ರತಿಭಟನೆ ವೇಳೆ ₹5,500 ದರದ ಬೇಡಿಕೆ ಮುಂದಿಡುವ ನೀವು, ಸಭಾಂಗಣದ ಒಳಗೆ ₹4,500 ದರದ ಬಗ್ಗೆ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
*ಸೂಟ್ಕೇಸ್ ಗಿರಾಕಿ’ ಆರೋಪದಿಂದ ಹೆಚ್ಚಿದ ಉದ್ವಿಗ್ನತೆ*
ವಾದವಿವಾದದ ನಡುವೆ ಕೋಡಿಹಳ್ಳಿ ಬಣದ ರೈತರೊಬ್ಬರು ‘ಸೂಟ್ಕೇಸ್ ಗಿರಾಕಿ’ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಗಲಾಟೆ ಮತ್ತಷ್ಟು ತೀವ್ರಗೊಂಡಿತು. ಕೆಲವರು ಆ ರೈತನ ಮೇಲೆ ಮುಗಿಬಿದ್ದಿದ್ದು, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆಯಲ್ಲಿ ಭಾಗಿಯಾಗಿದ್ದ ಇಬ್ಬರು ರೈತರನ್ನು ಕರೆದೊಯ್ದರು.
ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚೆ ನಡೆಯಬೇಕಿದ್ದ ಸಭಾಂಗಣದಲ್ಲೇ ನಡೆದ ಈ ಸಂಘರ್ಷ ಇದೀಗ ಗಮನ ಸೆಳೆದಿದೆ. ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕೆಂಬ ಬೇಡಿಕೆ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಯಾವ ನಿರ್ಧಾರ ಹೊರಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.





