Select Page

Advertisement

ಬೆಮುಲ್ ನಿಂದ ರೈತರಿಗೆ ಭರ್ಜರಿ ಗಿಫ್ಟ್ ; ಸಾಹುಕಾರ್ ಮಹತ್ವದ ಘೋಷಣೆ

ಬೆಮುಲ್ ನಿಂದ ರೈತರಿಗೆ ಭರ್ಜರಿ ಗಿಫ್ಟ್ ; ಸಾಹುಕಾರ್ ಮಹತ್ವದ ಘೋಷಣೆ

ಗೋಕಾಕ: ರೈತರ ಹಿತದೃಷ್ಠಿ ಮತ್ತು ಜಿಲ್ಲಾ ಹಾಲು ಒಕ್ಕೂಟದ ಬೇಡಿಕೆಯಂತೆ ನಂದಿನಿ ಹಾಲಿನ ದರದಲ್ಲಿ ಬದಲಾವಣೆಯಾಗಿದ್ದು ಎಮ್ಮೆ ಹಾಲನ್ನು 3.40 ರೂ ಮತ್ತು ಆಕಳು ಹಾಲಿಗೆ ಪ್ರತಿ ಲೀಟರಗೆ 1 ರೂಗಳಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು.

ಸೋಮವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಕರೆಯಲಾಗಿದ್ದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 21 ರಿಂದ ಹೊಸ ದರಗಳು ಅನ್ವಯವಾಗಲಿವೆ ಎಂದು ಹೇಳಿದರು.

ಈಗಾಗಲೇ ಎಮ್ಮೆ ಹಾಲಿಗೆ ಪ್ರತಿ ಲೀಟರಗೆ 41.60 ರೂಗಳಿದ್ದು, 3.40 ರೂ ಹೆಚ್ಚಳದಿಂದ 45ರೂ ಪ್ರತಿ ಲೀಟರಗೆ ಹೆಚ್ಚಳಗೊಂಡಿದ್ದು ಸರ್ಕಾರದ 5 ರೂಗಳ ಪ್ರೋತ್ಸಾಹಧನ ಸೇರಿ ಒಟ್ಟು ಪ್ರತಿ ಲೀಟರಗೆ 50 ರೂಗಳು ರೈತರಿಗೆ ಸಿಗಲಿದೆ ಅದರಂತೆ ಆಕಳು ಹಾಲು ಈಗ 29.10 ರೂ ಇದ್ದು, ಇದನ್ನು 1 ರೂಗೆ ಹೆಚ್ಚಿಸಲಾಗಿದೆ. ಸರ್ಕಾರದ ಪ್ರೋತ್ಸಾಹಧನ ಸೇರಿ 35.10 ರೂ ಸಿಗಲಿದೆ. ಹೆಚ್ಚಳಗೊಂಡ ಹಣವು ಎಲ್ಲವೂ ಹಾಲು ಪೂರೈಕೆ ಮಾಡುತ್ತಿರುವ ರೈತರ ಖಾತೆಗಳಿಗೆ ನೇರವಾಗಿಯೆ ಜಮೆ ಆಗಲಿದೆ ಎಂದು ಅವರು ಹೇಳಿದರು.

ರೈತರ ಸಹಕಾರದಿಂದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವು ಪ್ರಗತಿಪಥದತ್ತ ಸಾಗುತ್ತಿದೆ. ಮಾಸಿಕವಾಗಿ ಅಂದಾಜು 5 ಕೋಟಿ ರೂಗಳ ಲಾಭ ಗಳಿಸುತ್ತಿದೆ. ಒಕ್ಕೂಟದ ಲಾಭಕ್ಕಿಂತ ನಮಗೆ ರೈತ ಶ್ರೇಯೋಭಿವೃದ್ದಿಯೇ ಮುಖ್ಯವಾಗಿದೆ. ಅದಕ್ಕಾಗಿಯೇ ಪರಿಷ್ಕೃತಗೊಂಡ ದರವನ್ನು ರೈತರಿಗೆ ನೀಡಲು ನಮ್ಮ ಒಕ್ಕೂಟವು ತೀರ್ಮಾನಿಸಿದೆ ಎಂದು ಅವರು ಹೇಳಿದರು.

ಸಂಘವು ಬೆಳೆಯಬೇಕಾದರೇ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಶ್ರಮ ದೊಡ್ಡದಿದೆ. ರೈತರ ಉಳಿವಿಗೆ ಇವರಿಬ್ಬರೂ ಸೇರಿ ದುಡಿದರೇ ನಮ್ಮ ಒಕ್ಕೂಟವು ಸಹ ಪ್ರಗತಿಯನ್ನು ಸಾಧಿಸುತ್ತದೆ. ಮುಂದಿನ ಜೂನ್ ತಿಂಗಳ ನಂತರ ಸಿಬ್ಬಂದಿಗಳ ಬೇಡಿಕೆಗಳಿಗೆ ಸ್ಪಂಧಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಯದರ್ಶಿಗಳಿಗೆ ಒಕ್ಕೂಟದಿಂದ ಜೀವವಿಮೇ ಮಾಡಿಸುವ ಉದ್ದೇಶವನ್ನು ಸಹ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ಮಾದರಿ ಮಾಡುವ ಆಸೆಯನ್ನು ಹೊಂದಿದ್ದೇನೆ. ಇದಕ್ಕಾಗಿ ಮೇಗಾಡೈರಿ ಸ್ಥಾಪಿಸುವ ಮಹತ್ವಾಕಾಂಕ್ಷೆ ನನ್ನದಾಗಿದೆ. ಇದಕ್ಕಾಗಿ ಪ್ರತಿನಿತ್ಯ 4 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕು. ಮುಂದಿನ ದಿನಗಳಲ್ಲಿ ಈ ಗುರಿಯನ್ನು ತಲುಪಬೇಕಾಗಿದೆ. ಇದಕ್ಕಾಗಿ ರೈತರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಸಂಘಕ್ಕೆ ಪೂರೈಕೆ ಮಾಡಿದ ರೈತರಿಗೆ ಕೇವಲ ಹತ್ತು ದಿನಗಳೊಳಗೆ ಬಿಲ್‌ನ್ನು ಸಂದಾಯ ಮಾಡಲು ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಾರ್ಚ ತಿಂಗಳ ಅಂತ್ಯದೋಳಗೆ ಸುಮಾರು 400 ಕೋಟಿ ರೂಗಳ ವಾರ್ಷಿಕ ವಹಿವಾಟು ನಡೆಸುವ ಗುರಿಯನ್ನು ಹೊಂದಿದ್ದೇವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಬೆಮ್ಯಲ್ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ|| ಬಸವರಾಜ ಪರವನ್ನವರ, ಬಾಬುರಾವ ವಾಗ್ಮೋಡೆ, ವೀರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಭೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ,

ಸವಿತಾ ಖಾನಪ್ಪಗೋಳ, ನಾಮನಿರ್ದೆಶಿತ ನಿರ್ದೇಶಕರಾದ ಸದಾಶಿವ ದೇಶಿಂಗೆ, ರವೀಂದ್ರ ಪಾಟೀಲ, ಡಾ|| ರಾಜೀವ ಕುಲೇರ, ಜಯಕುಮಾರ, ಡಾ|| ಕೃಷ್ಣ ಕ್ಯೂರ್, ವ್ಯವಸ್ಥಾಪಕ ನಿರ್ದೇಶಕ ಡಾ|| ವಿ.ಎನ್. ಶ್ರೀಕಾಂತ ಅವರು ಉಪಸ್ಥಿತರಿದ್ದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಸ್ಯೆಗಳನ್ನು ಬಾಲಚಂದ್ರ ಜಾರಕಿಹೊಳಿ ಅವರು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!