
ಬೈಲಹೊಂಗಲ : 150 ಅಡಿ ಪಾಳು ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಯುವಕ

ಬೈಲಹೊಂಗಲ: ಈ ಸಮಾಜದಲ್ಲಿ ಮನುಷ್ಯನ ಜೀವಕ್ಕೆ ಮಾತ್ರವಲ್ಲ, ಮೂಕಪ್ರಾಣ ಗಳ ಜೀವಕ್ಕೂ ಬೆಲೆ ಇದೆ ಎಂಬುದನ್ನು ಪಟ್ಟಣದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಸಾಬೀತು ಮಾಡಿದ್ದಾರೆ.
ಪಟ್ಟಣದ ರುದ್ರಾಕ್ಷಿಮಠ ಗಲ್ಲಿಯ ಮಹಾಂತೇಶ ಜತ್ತಿ ಅವರ ಮನೆಯ ಹಿಂದಿನ ಸುಮಾರು 150 ಅಡಿ ಆಳದ ಪಾಳು ಬಾವಿಯಲ್ಲಿ ಬಿದ್ದ ಬೆಕ್ಕನ್ನು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಬೈಲಹೊಂಗಲ ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
150 ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿತ್ತು, ಜತ್ತಿ ಮನೆಯವರು ಬೆಕ್ಕನ್ನು ರಕ್ಷಿಸುವಂತೆ ಅಗ್ನಿಶಾಮಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಗ್ನಿಶಾಮಕ ದಳದವರು ಮೊಬೈಲ್ ಮೂಲಕ ಸಮಾಜಸೇವಕ ಮಲ್ಲಿಕಾರ್ಜುನ ಗಾಣ ಗೇರ ಅವರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಯಿಸಿದಾಗ , ಮಲ್ಲಿಕಾರ್ಜುನ ಅವರು 150 ಅಡಿ ಬಾವಿಯಲ್ಲಿ ಬೆನ್ನಿಗೆ ಹಗ್ಗ ಕಟ್ಟಿಕೊಂಡು ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.
ಸತತವಾಗಿ 6 ಗಂಟೆಗಳ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ, ಎಸ್ ಎಸ್ ವಾಲಿಶೆಟ್ಟಿ, ಆರ್ ಎನ್ ಬಂಡಿವಡ್ಡರ, ಎ ಎಚ್ ಮಾದರ, ಎಂ ಎಸ್ ಸಂಗೊಳ್ಳಿ, ಆರ್ ಕೆ ಘಸ್ತಿ, ಎಂ ಐ ಧಮ್ಮಸೂರ, ಎಸ್ ಪಿ ಮದ್ನಳ್ಳಿ ಇದ್ದರು.
ಬೆಕ್ಕಿನ ಮಾಲೀಕರು ಸಮಾಜ ಸೇವಕ ಮಲ್ಲಿಕಾರ್ಜುನ ಗಾಣ ಗೇರ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.