ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ಭೀಕರ ಅಪಘಾತದಲ್ಲಿ ಕಾರು ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಅಧಿಕ ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಈ ದುರ್ಘಟನೆ ನಡೆದಿದೆ.
ಬೈಲಹೊಂಗಲದಿಂದ ಬೆಳವಡಿ ಕಡೆಗೆ ಅತೀವೇಗದಲ್ಲಿ ಸಾಗುತ್ತಿದ್ದ ಕಾರು ಜಾಲಿಕ್ಕೊಪ್ಪ ಗ್ರಾಮದ ಸಮೀಪ ರಸ್ತೆ ದಾಟುತ್ತಿದ್ದ ಕುರಿಗಳ ಹಿಂಡಿನ ಮೇಲೆ ಏಕಾಏಕಿ ಹರಿದಿದೆ. ಪರಿಣಾಮ ಹಲವಾರು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೂ ಅನೇಕ ಕುರಿಗಳು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ನರಳಾಡುತ್ತಿದ್ದ ದೃಶ್ಯ ಕಂಡುಬಂದಿದೆ.
ಅಪಘಾತದಲ್ಲಿ ಮೃತಪಟ್ಟ ಕುರಿಗಳು ಕೆಂಗಾನೂರ ಗ್ರಾಮದ ಚಂದ್ರಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರಿಗೆ ಸೇರಿವೆ ಎಂದು ತಿಳಿದುಬಂದಿದೆ. ಹಲವಾರು ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಿದ್ದ ಹೃದಯವಿದ್ರಾವಕ ದೃಶ್ಯ ಕಂಡು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.
ರಸ್ತೆ ತುಂಬಾ ಸತ್ತ ಕುರಿಗಳು ಬಿದ್ದಿರುವುದು ಹಾಗೂ ಗಾಯಗೊಂಡ ಕುರಿಗಳ ನರಳಾಟ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ತಪ್ಪಿತಸ್ಥ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುರಿಗಳ ಮಾಲೀಕರು ಆಗ್ರಹಿಸಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



