Select Page

Advertisement

ರಸ್ತೆ ದುರಸ್ತಿಗೆ ಆಗ್ರಹಿಸಿ ನಾವಲಗಟ್ಟಿ ಗ್ರಾಮಸ್ಥರಿಂದ ಮನವಿ

ರಸ್ತೆ ದುರಸ್ತಿಗೆ ಆಗ್ರಹಿಸಿ ನಾವಲಗಟ್ಟಿ ಗ್ರಾಮಸ್ಥರಿಂದ ಮನವಿ

ಬೈಲಹೊಂಗಲ : ತಾಲೂಕಿನ ಮರಿಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ನಾವಲಗಟ್ಟಿ ಗ್ರಾಮದಿಂದ ಪುನರವಸತಿ ಕೇಂದ್ರ-೧ಕ್ಕೆ ಸಂಪರ್ಕ ಕಲ್ಪಿಸಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಶನಿವಾರ ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಬೈಲಹೊಂಗಲ ಉಪವಿಭಾಗಾಧಿಕಾರಿ, ತಹಶೀಲ್ದಾರ, ಲೋಕೊಪಯೋಗಿ, ನೀರಾವರಿ, ಸಮಾಜ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಆಗ್ರಹಿಸಿದರು.

ತಿಗಡಿ ಹರಿನಾಲಾ ಡ್ಯಾಂ ಹಿನ್ನೀರಿನಿಂದ ಸ್ಥಳಾಂತರಗೊಂಡಿರುವ ಪುನರವಸತಿ ಕೇಂದ್ರ-೧ರಲ್ಲಿ ಬಹುತೇಕ ಜನರು ಪರಿಶಿಷ್ಟ ಜಾತಿ, ಪಂಗಡ ಹಾಗೂ ಬಡ ವರ್ಗದ ಜನರು ವಾಸವಾಗಿದ್ದಾರೆ. ಈ ಕೇಂದ್ರದಲ್ಲಿಯೇ ನಾವಲಗಟ್ಟಿ, ಹಿರೇಮೆಳೆ, ಪುಲಾರಕೊಪ್ಪ, ಪುನರವಸತಿ ಕೇಂದ್ರ-೧ ಮತ್ತು ೨ರಲ್ಲಿನ ಮಕ್ಕಳ ಶಿಕ್ಷಣಕ್ಕಾಗಿ ಹಿರಿಯ ಪ್ರಾಥಮಿಕ ಶಾಲೆಯೂ ಇದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ರಸ್ತೆ ತೀರಾ ಹದಗೆಟ್ಟಿರುವುದರಿಂದ ತೀವ್ರ ಸಮಸ್ಯೆ ಆಗುತ್ತಿದೆ.

ಅಲ್ಲದೇ ರಸ್ತೆ ಪಕ್ಕದ ಎರಡು ಬದಿಯ ಚರಂಡಿ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತದೆ. ಇದರಿಂದ ಶಾಲೆ ಮಕ್ಕಳಿಗೆ ಅನಾರೋಗ್ಯ, ವಿಷ ಜಂತುಗಳ ಆತಂಕವೂ ಮಣೆ ಮಾಡಿದೆ. ಆದರಿಂದ ಒಂದು ವಾರದಲ್ಲಿ ನಾವಲಗಟ್ಟಿ ಗ್ರಾಮದಿಂದ ಪುನರವಸತಿ ಕೇಂದ್ರ-೧ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಎರಡು ಬದಿ ಚರಂಡಿಯನ್ನು ಹೊಸದಾಗಿ ನಿರ್ಮಿಸಲು ಕ್ರಮಕೈಗೊಳ್ಳಬೇಕು.

ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು, ಈ ವೇಳೆ ಅಹಿತಕರ ಘಟನೆಗಳು ಜರುಗಿದಲ್ಲಿ, ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಶಿವಾನಂದ ಕಲ್ಲೂರ, ದರ್ಶನ ಚಿಕ್ಕಮಠ, ಬಸವರಾಜ ಕಲ್ಲೂರ, ಆನಂದ ಭಾವಿ, ಬಸವರಾಜ ಮೋಡಿ, ಶ್ರೀಧರ ನಾವಲಗಟ್ಟಿ, ಲಕ್ಷ್ಮಣ ಕಮ್ಮಾರ, ಸಂತೋಷ ಕಮ್ಮಾರ, ಗಂಗಪ್ಪ ಧರೆಪ್ಪನವರ, ಶಿವನಪ್ಪ ಪಾಟೀಲ, ದುಂಡಪ್ಪ ನಾವಲಗಟ್ಟಿ, ನಿಂಗಪ್ಪ ಕೋಟಗಿ, ಸಂಜು ಹುದಲಿ, ಈರಪ್ಪ ಮೋಡಿ, ಸುರೇಶ ಕಮ್ಮಾರ, ಕಲ್ಮೇಶ ಹುದಲಿ ಸೇರಿದಂತೆ ಮೊದಲಾದವರು ಇದ್ದರು.

ಮರಿಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿನ ನಾವಲಗಟ್ಟಿ ಗ್ರಾಮಕ್ಕೆ ಸಂಬಂಧಿಸಿದ ಆಸ್ತಿ ನೊಂದಣಿ ಪುಸ್ತಕ ಗ್ರಾಪಂ ಕಾರ್ಯಾಲಯದಲ್ಲಿ ಇಲ್ಲದಿರುವುದರಿಂದ ಹಲವು ತಿಂಗಳುಗಳಿಂದ ಆಸ್ತಿ, ಮನೆಗಳ ನೊಂದಣಿ, ವರ್ಗಾವಣೆ ಮಾಡುವ ಕಾರ್ಯ ಸ್ಥಗಿತವಾಗಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಒಂದು ವಾರದಲ್ಲಿ ನಾವಲಗಟ್ಟಿ ಗ್ರಾಮಕ್ಕೆ ಸಂಬಂಧಿಸಿದ ಆಸ್ತಿ ನೊಂದಣಿ ಪುಸ್ತಕವನ್ನು ಗ್ರಾಮ ಪಂಚಾಯತಿಗೆ ಕೊಡದೆ ಹೋದಲ್ಲಿ ಗ್ರಾಮಸ್ಥರಿಂದ ಗ್ರಾಪಂ ಕಾರ್ಯಾಲಯಕ್ಕೆ ಹಾಗೂ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಪಂ ಇಒ ಸುಭಾಷ ಸಂಪಗಾಂವಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *