ಮಠದ ಸ್ವಾಮೀಜಿಯನ್ನೇ ವಂಚಿಸಿದ ಜೆಡಿಎಸ್ ಮುಖಂಡ
ಬಾಗಲಕೋಟೆ : ಮಠದ ಸ್ವಾಮೀಜಿ ಒಬ್ಬರಿಗೆ ಧಮ್ಕಿ ಹಾಕುವ ಮೂಲಕ ಒಂದು ಕೋಟಿ ರೂ. ಹಣ ವಂಚಿಸಿದ್ದಲ್ಲದೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಜೆಡಿಎಸ್ ಮುಖಂಡನನ್ನು ಬಾಗಲಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಜೆಡಿಎಸ್ ಮುಖಂಡ ಪ್ರಕಾಶ್ ಮುಧೋಳ ಎಂಬಾತ ನಾನು ಎಡಿಜಿಪಿ ( ಪೊಲೀಸ್ ಅಧಿಕಾರಿ ) ಎಂದು ಹೇಳಿ ತಾಲೂಕಿನ ತುಳಸಿಗೇರಿಯಲ್ಲಿರುವ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿಗೆ ಧಮ್ಕಿ ಹಾಕಿದ್ದಾನೆ. ನಿಮ್ಮ ಮೇಲೆ ಅನೇಕ ಪ್ರಕರಣಗಳ ಕುರಿತು ದಾಖಲೆ ಇದ್ದು ಈ ಕುರಿತು ಕೆಲ ಸಾಕ್ಷ್ಯಗಳು ನಮ್ಮ ಬಳಿ ಇದ್ದು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಜೆಡಿಎಸ್ ಮುಖಂಡನ ಬೆದರಿಕೆಗೆ ಹೆದರಿದ ಪರಮರಾಮಾರೂಢರು ಹಿಂದೆ ಮುಂದೆ ನೋಡದೆ ಅಸಹಾಯಕರಾಗಿದ್ದಾರೆ. ನಂತರ ಕರೆ ಮಾಡಿದ್ದ ವ್ಯಕ್ತಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪಿಕೊಂಡ ಸ್ವಾಮೀಜಿ ಭಕ್ತರು ಸೇರಿದಂತೆ ಮಠದಲ್ಲಿದ್ದ ಸುಮಾರು 61 ಲಕ್ಷ ಹಣವನ್ನು ಆರೋಪಿಗೆ ಕೊಟ್ಟಿದ್ದಾರೆ. ಉಳಿದ ಹಣವನ್ನು ಕೆಲ ದಿನಗಳ ನಂತರ ಸುಮಾರು 39 ಲಕ್ಷ ಸೇರಿಸಿ ಒಂದು ಕೋಟಿ ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಪಿ ಸ್ವಾಮೀಜಿ ಬಳಿ ಇದ್ದ ಕೆಲ ದಾಖಲೆಗಳು ಹಾಗು ಖಾಲಿ ಚಕ್ ಗಳನ್ನು ಪಡೆದುಕೊಂಡಿದ್ದು ಹಣ ಕೊಟ್ಟ ಮೇಲೆ ವಾಪಸ್ ಕೊಡಲು ನಿರಾಕರಿಸಿದ್ದಾನೆ. ಮತ್ತೆ 25 ಲಕ್ಷ ಹಣ ಕೊಡುವಂತೆ ಸ್ವಾಮೀಜಿ ಹಿಂದೆ ಬಿದ್ದಿದ್ದಾನೆ. ಅನುಮಾನಗೊಂಡ ಸ್ವಾಮೀಜಿ ಆರೋಪಿ ವಿರುದ್ಧ ಬಾಗಲಕೋಟೆ ಸೈಬರ್ ಠಾಣೆಗೆ ಪ್ರಕರಣ ದಾಖಲಿಸಿದ್ದರು.
ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಕರಣದ ಹಿಂದೆ ಜೆಡಿಎಸ್ ಮುಖಂಡ ಪ್ರಕಾಶ್ ಮುಧೋಳ ಎಂಬಾತನನ್ನು ಬಂಧಿಸಿದ್ದಾರೆ. ಎಸ್ಪಿ ಅಮರನಾಥ ರೆಡ್ಡಿ, ಎಎಸ್ಪಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಡಿಎಸ್ಪಿ ಎಂ.ಕೆ.ಗಂಗಲ್, ಸಿಪಿಐ ಎಂ.ನಾಗರಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದಾರೆ.


