ಬೆಳಗಾವಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಕ್ಷಕರೇ ಭಕ್ಷಕರಾದರೆ, ಆಳುವ ದೊರೆಗಳೇ ದುರುಳರಾದರೆ, ಬಡವರ ಪರ ಇರಬೇಕಾದವರೇ ಕಿತ್ತು ತಿನ್ನುವ ಹದ್ದುಗಳಾದರೆ ನೊಂದವರು ವಿಷ ಸೇವಿಸದೆ ಇನ್ನೇನು ಅಮೃತ ಸವಿಯಲು ಸಾಧ್ಯವೇ..? ಇಂತಹುದೇ ಕ್ರೌರ್ಯ ತುಂಬಿದ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಇದೆಲ್ಲವೂ ಕಣ್ಣಮುಂದೆ ನಡೆದರೂ ವ್ಯವಸ್ಥೆ ಕೈಕಟ್ಟಿ ಕುಳಿತಿರುವುದು ವಿಪರ್ಯಾಸವೇ ಸರಿ.

ಹೌದು ಕಾಂಗ್ರೆಸ್ ಪಕ್ಷದ ನಾಯಕಿ ಎಂದು ಗುರುತಿಸಿಕೊಂಡು ಸಮಾಜಸೇವಕಿ ವೇಶದಲ್ಲಿದ್ದ ಮಹಿಳಾ ನಾಯಕಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನೊಂದ ಮಹಿಳೆಯ ಪರ ನಿಲ್ಲಬೇಕಿದ್ದ ಈ ನಾಯಕಿ ಕಣ್ಣೀರು ಒರೆಸುವ ಬದಲಿಗೆ ವಿಷ ಸೇವಿಸುವಂತೆ ಮಾಡಿದ್ದರೂ ಈವರೆಗೂ ಸಂತ್ರಸ್ತೆಯ ಪರ ಯಾರೋಬ್ಬರೂ ನಿಲ್ಲದಿರುವುದು ವ್ಯವಸ್ಥೆಗೆ ಹಿಡಿದ ಕೈಗಣ್ಣಡಿಯಾಗಿದೆ.

ಯಾರು ಈ ಮಹಿಳಾ ಕಾಂಗ್ರೆಸ್ ನಾಯಕಿ : ಸದಾಕಾಲವೂ ಕಾಂಗ್ರೆಸ್ ಪಕ್ಷದ ಪರವಾಗಿ ಗುರುತಿಸಿಕೊಂಡಿರುವ ಆಯೇಶಾ ಸನದಿ ಎಂಬ ಮಹಿಳೆ ಮೇಲೆಯೇ ಗಂಭೀರ ಆರೋಪ ಕೇಳಿಬಂದಿದೆ. ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪರವಾಗಿ ಇರುವವಳು ಎಂದು ಈಕೆಯೇ ಹೇಳಿಕೊಳ್ಳುತ್ತಾ ಬಂದಿದ್ದು, ಸಧ್ಯ ಗಂಭೀರ ಆರೋಪ ಎದುರಿಸುತ್ತಿದ್ದಾಳೆ.

ಏನಿದು ಘಟನೆ : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡ ಆಹುಗನ ಜೊತೆ ಮದುವೆ ಆಗಬಾರದು. ಇಲ್ಲವಾದರೆ ಖಾಸಗಿ ಕ್ಷಣದ ಫೋಟೋಗಳನ್ನು ಮಾಧ್ಯಮಕ್ಕೆ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಬೆಳಗಾವಿ ಕಾಂಗ್ರೆಸ್ ಮುಖಂಡೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಮನನೊಂದ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಸಲೀಂ‌ ಕಿಲ್ಲೇದಾರ್ ಎಂಬಾತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳಿಸಿದ್ದಲ್ಲದೆ, ಖಾಸಗಿ ಕ್ಷಣದ ಫೋಟೋಗಳನ್ನು ಇಟ್ಟುಕೊಂಡಿದ್ದಾನೆ. ಈಗ ಸಂತ್ರಸ್ತ ಯುವತಿ ಸಲೀಂ ಎಂಬ ಯುವಕನಿಗೆ ಮದುವೆ ಆಗುವಂತೆ ಕೇಳುತ್ತಿದ್ದಾಳೆ. ಆದರೆ ಬೆಳಗಾವಿ ಕಾಂಗ್ರೆಸ್ ಮುಖಂಡೆ ಆಯೇಶಾ ಸನದಿ ಯುವಕನನ್ನು ಬಿಟ್ಟುಬಿಡು, ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ, ಇವರ ಪಿಎ ನನಗೆ ಪರಿಚಯ ಇದ್ದಾರೆ. ಪೊಲೀಸ್ ಠಾಣೆಯಲ್ಲಿ ನನ್ನ ಮಾತು ನಡೆಯುತ್ತದೆ. ಯಾವುದೇ ಕಾರಣಕ್ಕೂ ಯುವಕನನ್ನು ಮದುವೆ ಆಗಬಾರದು ಎಂದು ಕಾಂಗ್ರೆಸ್ ಮುಖಂಡೆ ಆಯೇಷಾ ಸನದಿ ಬೆದರಿಕೆ ಹಾಕುತ್ತಿದ್ದು, ಇದರಿಂದ ನೊಂದ ಸಂತ್ರಸ್ತ ಯುವತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು ಸಾವು, ಬದುಕಿನ ನಡುವೆ ಹೋರಾಡುತ್ತಿದ್ದು ಕೂಡಲೇ ನಮಗೆ ನ್ಯಾಯ ಒದಗಿಸುವಂತೆ ಯುವತಿಯ ಪೋಷಕರು ಬೆಳಗಾವಿ ಪೊಲೀಸ್ ಕಮಿಷನರ್ ಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೆಸರು ಬಳಸಿ ಕಿರುಕುಳ : ಸಧ್ಯ ಈ ಘಟನೆಯಲ್ಲಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖವಾಗಿದೆ. ಕಾಂಗ್ರೆಸ್ ಮುಖಂಡೆ ತಾನು ಸತೀಶ್ ಜಾರಕಿಹೊಳಿ ಅವರಿಗೆ ಆಪ್ತೆಯಾಗಿದ್ದು ನಾನು ಹೇಳಿದಂತೆ ಕೇಳಬೇಕು, ಪೊಲೀಸರು ನನ್ನ ಕೈಯಲ್ಲಿ ಇದ್ದಾರೆ ಎಂದು ಕಿರುಕುಳ ನೀಡಿದ್ದಾಳೆ. ಅನವಶ್ಯಕವಾಗಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಬಳಸಿಕೊಂಡ ಕಾಂಗ್ರೆಸ್ ನಾಯಕಿ ತನ್ನ ಲಾಭಕ್ಕಾಗಿ ಕೀಳು ಮಟ್ಟಕ್ಕೆ ಇಳಿದಿರುವುದು ನೊಂದ ಯುವತಿಯ ಪೋಷಕರ ದೂರಿನಿಂದ ತಿಳಿದುಬಂದಿದೆ.

ನಿದ್ರೆಯಿಂದ ಎದ್ದೇಳದ ಪೊಲೀಸ್ ಇಲಾಖೆ : ಸಂತ್ರಸ್ತ ಯುವತಿ ತನಗೆ ಆದ ಅನ್ಯಾಯಕ್ಕೆ ದಿಕ್ಕು ತೋಚದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಧ್ಯ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಯುವತಿಯ ಪೋಷಕರು ನ್ಯಾಯಕ್ಕಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಅಲೆಯುತ್ತಿದ್ದಾರೆ. ಇಷ್ಟೇಲ್ಲಾ ಆದರೂ ಪೊಲೀಸ್ ಇಲಾಖೆ ಮಾತ್ರ ನಿದ್ರೆಯಿಂದ ಏಳುವ ಪ್ರಯತ್ನ ಮಾಡುತ್ತಿಲ್ಲ. ಕಣ್ಣಮುಂದೆ ಒಂದು ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೆ ಈವರೆಗೂ ಪ್ರಕರಣ ದಾಖಲಿಸಿಕೊಳ್ಳುವ ಪ್ರಯತ್ನ ಮಾಡದಿರುವುದು ವಿಪರ್ಯಾಸವೇ ಸರಿ.