ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟ ಸವದಿ : ಅತಂತ್ರದಲ್ಲಿ ಕುಮಠಳ್ಳಿ
ಅಥಣಿ : ರಾಜ್ಯ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜಕೀಯ ಬದಲಾವಣೆಗಳಿಂದ ಸಧ್ಯ ತಾವು ಪ್ರತಿನಿಧಿಸುವ ಅಥಣಿ ಮತಕ್ಷೇತ್ರವನ್ನು ಶಾಸಕ ಕುಮಠಳ್ಳಿ ಅವರಿಗೆ ತ್ಯಾಗ ಮಾಡಿದ್ದಾರೆ. ಜಿತೆಗೆ ಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಇವರು ಭರದಿಂದ ಸಿದ್ದತೆ ಕೈಗೊಂಡಿರುವುದು ಸ್ಪಷ್ಟ.
ಹೌದು ಈಗಾಗಲೇ ಮುಂಬರುವ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಮಹೇಶ್ ಕುಮಠಳ್ಳಿ ಅವರೇ ಅಂತಿಮ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಅಥಣಿ ರಾಜಕೀಯ ಸಮೀಕರಣ ಬದಲಾಗುತ್ತಿದ್ದು, ಶಾಸಕ ಕುಮಠಳ್ಳಿ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರ ನಡುವಿನ ಅಂತರ ಮಾತ್ರ ಹೆಚ್ಚುತ್ತಾ ಸಾಗಿದೆ.
ಸವದಿ ಕಾರ್ಯಕ್ರಮಕ್ಕೆ ಕುಮಠಳ್ಳಿ ಗೈರು : ಸರ್ಕಾರಿ ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಶಾಸಕರ ಉಪಸ್ಥಿತಿ ಮಹತ್ವ ಪಡೆಯುತ್ತದೆ. ಆದರೆ ಸೋಮವಾರ ನಡೆದ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ಕುಮಠಳ್ಳಿ ಗೈರಾಗಿದ್ದರು. ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಅಥಣಿ ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ ಎಂಬುದು.
ಸವದಿ ನಿಗೂಢ ನಡೆ : ಸಧ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ ಮಾತ್ರ ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದಾರೆ. ಇತ್ತ ಪಕ್ಷ ನೀಡುವ ಜವಾಬ್ದಾರಿ ಹಾಗೂ ಆದೇಶವನ್ನು ಪ್ರಾಮಾಣಿಕವಾಗಿ ಪಾಲಿಸುತ್ತೇನೆ ಎಂದು ಹೇಳುವವರು ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸ್ಪಷ್ಟ ನಿಲುವು ತಳೆದಿಲ್ಲ. ಇದರಿಂದ ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ತ್ಯಾಗ ಮಾಡಿ ಕೈ ಸುಟ್ಟುಕೊಳ್ಳುವರಾ ಕುಮಠಳ್ಳಿ : ಇನ್ನೂ ರಾಜಕೀಯ ಬದಲಾದ ಸಮೀಕರಣದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಮಾತ್ರ ಕ್ಷೇತ್ರದ ವಿಷಯದಲ್ಲಿ ಸಂಕಷ್ಟ ಬರುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರ ನಡೆಯಿಂದ ಬೇಸತ್ತಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದ್ದು ಇದರಿಂದ ಮುಂದೆ ಯಾವ ನಿರ್ಧಾರ ತಗೆದುಕೊಳ್ಳಿವರು ಎಂದು ಕಾದು ನೋಡಬೇಕು.
***************
ವೇದಿಕೆಯಲ್ಲಿ ಕಣ್ಣೀರು ಹಾಕಿದ ಸಚಿವ ಸಿಸಿ ಪಾಟೀಲ್ ಹಾಗೂ ಲಕ್ಷ್ಮಣ್ ಸವದಿ
ರಾಜಕೀಯ ಜೀವನದಲ್ಲಿ ಸಿ ಸಿ ಪಾಟೀಲ ಅವರು ನನಗೆ ಸ್ವಂತ ಸಹೋದರನಿಗಿಂತ ಹೆಚ್ಚು ಮಾರ್ಗದರ್ಶನ ಮಾಡಿದ್ದಾರೆ, ನನ್ನ ರಾಜಕೀಯ ಏರಿಳತದ ಪ್ರತಿಯೊಂದು ಹಂತದಲ್ಲಿ ನನ್ನ ಬೆನ್ನೆಲುಬಾಗಿದ್ದವರು ಎಂದು ಲಕ್ಷ್ಮಣ ಸವದಿ ಅವರು ತಮ್ಮ ಹಳೆ ವಿಚಾರ ಮೆಲುಕು ಹಾಕುತ್ತಿರುವಾಗ ಸಚಿವ ಸಿ ಸಿ ಪಾಟೀಲ ಅವರು ಕಣ್ಣೀರು ಹಾಕಿದ ಪ್ರಸಂಗ ಜರುಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ಜರುಗಿದ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮ ಉದ್ದಕ್ಕೂ ಭಾವನಾತ್ಮಕ ಭಾಷಣ ಮಾಡುತ್ತಾ ತಮಗೂ ಸಿ ಸಿ ಪಾಟೀಲ ಅವರಿಗೂ ಇರುವ ಸಂಭಂಧಗಳ ಬಗ್ಗೆ ನೆರೆದ ಸಾರ್ವಜನಿಕರಿಗೆ ವಿವರಿಸುತ್ತಿರುವಾಗ ಸಿ ಸಿ ಪಾಟೀಲ ಅವರು ಕಣ್ಣೀರು ಹಾಕಿದರು ಅವರನ್ನು ನೋಡಿ ಸವದಿ ಅವರೂ ಕೂಡ ಕಣ್ಣೀರು ಹಾಕಿ ನೆರೆದ ಪ್ರೇಕ್ಷಕರನ್ನು ಭಾವಪರವಶವಾಗಿಸಿದರು.
ಅನಂತರ ಸವದಿ ಅವರ ಭಾಷಣ ವೇಳೆ ಅಭಿಮಾನಿ ಒರ್ವ ಕರ್ನಾಟಕ ಹುಲಿ ಎಂದು ಘೋಷಣೆ ಮಾಡಿದಾಗ ‘ಏ ಸುಮ್ಮನಿರು ಇನ್ನಲ್ಲೆ ಹುಲಿ’, ಹುಲಿ ಹಳೆದು ಆಗಿದೆ, ಹುಲಿ ಉಗುರು ಹೋಗಿದೆ ಎಂದು ಕಳೆದ ಅಥಣಿ ಚುನಾವಣೆಯಲ್ಲಿ ಸೋತಿರುವ ಘಟನೆ ಮೆಲುಕುಹಾಕಿದರು.