ಬೆಳಗಾವಿಯಲ್ಲಿ ಜವರಾಯನ ಅಟ್ಟಹಾಸ ; ಅಪಘಾತದಲ್ಲಿ 9 ಜನ ಸಾವು
ಬೆಳಗಾವಿ : ಗುರುವಾರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸಾವಣಪ್ಪಿರುವ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು ಪ್ರತ್ಯೇಕ ಅಪಘಾತದಲ್ಲಿ ಒಟ್ಟು 9 ಜನ ಸಾವಣಪ್ಪಿರುವ ಘಟನೆ ನಡೆದಿದೆ.
ಶುಕ್ರವಾರ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಸಮೀಪದಲ್ಲಿ ಬೈಕ್ ಕಾರ್ ನಡುವೆ ಅಪಘಾತ ಸಂಭವಿಸಿದ್ದು ಆರು ಜನ ಮೃತಪಟ್ಟಿದ್ದಾರೆ.
ಮುಗಳಖೋಡ ಗ್ರಾಮದ ಹೊರವಲಯದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ಕಾರ ಒಂದು ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಅಪ್ಪಳಿಸುತ್ತಿದ್ದಂತೆ ಕಾರ್ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಐವರು ಸಾವಣಪ್ಪಿದ್ದರೆ ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮುಡಲಗಿ ತಾಲೂಕಿನ ಗುರ್ಲಾಪುರ ನಿವಾಸಿಗಳಾದ ಮಲ್ಲಿಕಾರ್ಜುನ ರಾಮಪ್ಪ ಮರಾಠೆ (೧೬), ಆಕಾಶ್ ರಾಮಪ್ಪ ಮರಾಠೆ (೧೪), ಲಕ್ಷ್ಮಿ ರಾಮಪ್ಪ ಮರಾಠೆ (೧೯) ಮತ್ತು ರಾಯಭಾಗ ತಾಲೂಕಿನ ಏಕನಾಥ ಭೀಮಪ್ಪ ಪಡತರಿ (೨೨) ಹಾಗೂ ಮುಗಳಖೋಡ ನಿವಾಸಿ ನಾಗಪ್ಪ ಲಕ್ಷ್ಮಣ್ ಯಾದನ್ನವರ್ (೪೮) ಹಾಗೂ ಮುಡಲಗಿ ತಾಲೂಕಿನ ದುರದುಂಡಿ ನಿವಾಸಿ ಹನುಮಂತ ಮಲ್ಲಪ್ಪ ಮಲ್ಯಾಗೋಳ (೪೨) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಹಾಗೂ ಅಥಣಿ ಸಿಪಿಐ ರವೀಂದ್ರ ನಾಯಕವಾಡಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಹಾರುಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದಾರೆ.
ಮೂಡಲಗಿ ತಾಲೂಕಿನ ಪಡಗುಂದಿ ಗ್ರಾಮದ ಮುತ್ತು ಸತ್ಯಪ್ಪ ನಾಯ್ಕ (08 ), ಗೋಪಾಲ ಸತ್ಯಪ್ಪ ನಾಯ್ಕ (45), ಧಾರವಾಡ ಮೂಲದ ಅನ್ನಪೂರ್ಣ ಬಾಳೇಶ ಶಿರೋಳ(53) ಮೃತರಾಗಿದ್ದಾರೆ.
ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


