ನಾವು ಸ್ಟ್ರಾಂಗ್ ಇರಲ್ಲ, ವೀಕಾಗಿ ಇರಲ್ಲ: ಸತೀಶ್ ಜಾರಕಿಹೊಳಿ ಹೀಗೆ ಹೇಳಲು ಕಾರಣ…?
ಬೆಳಗಾವಿ: ಎಲ್ಲರ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಸ್ಟ್ರಾಂಗ್ ಇರಲ್ಲ, ವೀಕಾಗಿ ಇರಲ್ಲ. ಭಿನ್ನಾಭಿಪ್ರಾಯ ಇದ್ದರೆ ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಜತೆ ಸಾವಿರಾರು ನಾಯಕರ, ಲಕ್ಷಾಂತರ ಮುಖಂಡರ ಪಾತ್ರ ಇದೆ. ಎಲ್ಲರ ಸಹಕಾರದಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂದರು.
ನಾವು ಪ್ರವಾಸಕ್ಕೆ ಹೋಗಿ ಇನ್ನೊಂದು ಪವರ್ ಸೆಂಟರ್ ಮಾಡಬೇಕೆಂಬ ಉದ್ದೇಶ ನಮ್ಮದಿಲ್ಲ. ಮುಂಚೆಯಿಂದ ಸಮಾನ ಮನಸ್ಕರು ಪ್ರವಾಸಕ್ಕೆ ಹೋಗಬೇಕೆಂದು ತಿರ್ಮಾನ ಆಗಿತ್ತು. ನಾವು ಎಲ್ಲರೂ ಕೂಡಿ ಇದ್ದೇವೆ, ಇವತ್ತು, ನಾಳೆ, ನಾಡಿದ್ದು ಕೂಡಿಯೇ ಇರುತ್ತೇವೆಂದು ತಿಳಿಸಿದರು.
ಸೈಲೆಂಟ್ ಆಗಿದ್ದರಿಂದ ಸಂದೇಶ ರವಾನೆ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂದೇಶ ಇಲ್ಲ ನಾವೆಲ್ಲ ಕೂಡಿ ಇದ್ದೇವೆ. ಕಾಂಗ್ರೆಸ್ ಪಕ್ಷದ ಒಳಗೆ ಇರುವ ಗುಟ್ಟದು. ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಚಮಕ್ ಕೊಟ್ಟು ಮುಂದುವರೆಸಬೇಕು. ಚಮಕ್ ಕೊಟ್ಟು ಗಯಾಬ್ ಆದ್ರೆ ಹೇಗೆ? ನಾವೆಲ್ಲ ಒಟ್ಟಾಗಿ ಇದ್ದೇ ಇರುತ್ತೇವೆ, ಮೆಜಾರಿಟಿ ಜನ ನಮ್ಮ ಜತೆಗೆ ಇರುತ್ತಾರೆ. ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವ ಕೆಲಸ ಬೇಡ. ಸಿಎಂ ಇದ್ದಾರೆ ಅಧ್ಯಕ್ಷರಿದ್ದಾರೆ ಸಮಸ್ಯೆ ಇದ್ದರೆ ಅವರ ಗಮನಕ್ಕೆ ತರುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ನಾವು ಹೇಳುತ್ತೇವೆ. ಜೆಡಿಎಸ್ನಲ್ಲಿ ಎರಡು ಗುಂಪಿದೆ, ಎಲ್ಲವೂ ಸರಿ ಎಂದು ನಾವೂ ಹೇಳುತ್ತೇವೆ. ಕುಮಾರಸ್ವಾಮಿ ಇಲ್ಲ. ಅವರದು, ಸಿಎಂ ಇಬ್ರಾಹಿಂ ಅವರದ್ದು ಒಂದು ಗುಂಪಿದೆ. ಅವರನ್ನ ಅವರು ಹೊರ ಹಾಕಿದ್ದರೆ, ಇವರನ್ನ ಅವರು ಹೊರ ಹಾಕಿದ್ದಾರೆ.
ಬಿಜೆಪಿಯಲ್ಲಿ ಮೂರು ಗುಂಪಿದೆ ಇಲ್ಲಾ ಅಂತೇನಿಲ್ಲ. ನಮ್ಮಲ್ಲಿ ಸ್ವಾಭಾವಿಕವಾಗಿ ಗುಂಪಿದೆ ಇಲ್ಲಾ ಅಂತೇನಿಲ್ಲ. ಪಕ್ಷ ಬಂದಾಗ ನಾವೆಲ್ಲಾ ಒಂದಾಗುತ್ತೇವೆ. ಜಿಲ್ಲೆಯಲ್ಲಿ ಬೇರೆ ಬೇರೆ ಇದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ ಎಂದು ಹೇಳಿದರು.
ವಿಮಾನ ಹಾರಾಡುವಾಗ ಜೋರಾದ ಗಾಳಿಗೆ ಸ್ವಲ್ಪ ಮೇಲೆ– ಕೆಳಗೆ ಅಲ್ಲಾಡುತ್ತದೆ. ಅಷ್ಟಕ್ಕೇ ಏನೂ ಆಗುವುದಿಲ್ಲ. ಸುರಕ್ಷಿತವಾಗಿರುತ್ತದೆ. ನಮ್ಮ ಸರ್ಕಾರವೂ ಸುರಕ್ಷಿತವಾಗಿರುತ್ತದೆ. ಏನೂ ಆಗುವುದಿಲ್ಲ. ನನ್ನ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ನನ್ನ ಸಹೋದರ ಲಖನ್ ಜಾರಕಿಹೊಳಿ ಅವರ ವಿರುದ್ಧವಾಗಿ, ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ವರ್ಗಾವಣೆ ವಿಚಾರ ದೊಡ್ಡದೇನಲ್ಲ. ವಿವಾದ ಮಾಡುವಂಥ ವಿಷಯವೂ ಅಲ್ಲ. ಅಂಥ ಸಣ್ಣ ವಿಷಯಗಳಿಗೆ ನಾನು ತಲೆಕೆಡಿಸಿಕೊಳ್ಳುವವನಲ್ಲ. ಗುಂಪು ಕಟ್ಟಿಕೊಂಡು ಪಕ್ಷದ ನಾಯಕರಿಗೆ ಸಂದೇಶ ರವಾನೆ ಮಾಡುವ ಉದ್ದೇಶ ನನೆಗಿಲ್ಲ. ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಬದಲು ಬೇರೊಬ್ಬರನ್ನು ಮಾಡಿ ಎಂದು ನಾನೇ ಹೇಳಿದ್ದೇನೆ. ಯಾರನ್ನು ಮಾಡಬೇಕು, ಯಾರನ್ನು ಮಾಡಬಾರದು ಎಂಬುದಕ್ಕೆ ತಲೆಹಾಕಿಲ್ಲ. ಬದಲಾಗಿ, ರಾಜ್ಯದಾದ್ಯಂತ ಓಡಾಡಿ ಕೆಲಸ ಮಾಡುವವರನ್ನು ನೇಮಿಸಿ ಎಂದಷ್ಟೇ ಹೇಳಿದ್ದೇನೆ. ಈ ವಿಚಾರದಲ್ಲಿ ನನ್ನ ಹಾಗೂ ಉಪಮುಖ್ಯಮಂತ್ರಿ ಮಧ್ಯೆ ಯಾವುದೇ ಗೊಂದಲ ಇಲ್ಲ’ ಎಂದು ಉತ್ತರಿಸಿದರು.


