ಬೆಳಗಾವಿ : ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ನಿರಂತರ ಮಳೆಯಿಂದ ಎಂಟು ಮನೆಗಳು ನೆಲಕ್ಕುರುಳಿದ ಘಟನೆ ಸೋಮವಾರ ನಡೆದಿದೆ.

ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಧಾರಾಕಾರ‌ ಮಳೆಯ ಪರಿಣಾಮ ಎಂಟಕ್ಕೂ ಅಧಿಕ ಮನೆಗಳು ಧರೆಗುರುಳಿದ್ದು‌ ಸೂರು ಕಳೆದುಕೊಂಡವರ ಬದುಕು ಬೀದಿಗೆ ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಕಾಗದ ಪತ್ರಗಳು ಸೇರಿದಂತೆ ಮಹತ್ವದ ದಾಖಲೆಗಳು, ಹಣ ಸೇರಿದಂತೆ ದಿನಬಳಕೆಯ ವಸ್ತುಗಳು ನೀರುಪಾಲಾಗಿವೆ. ಇದರಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು ಸೂಕ್ತ ಪರಿಹಾರಕ್ಕೆ ಸಂತ್ರಸ್ತರು ಆಗ್ರಹಿಸಿದ್ದಾರೆ.

ನಗರದಲ್ಲಿ  ಸೋಮವಾರ ಮಧ್ಯಾಹ್ನ ಏಕಾಏಕಿ ಸುರಿದ ಮೇಘಸ್ಫೋಟದಂತ ಭಾರೀ ಮಳೆಯು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.

ಕೆಲವೇ ನಿಮಿಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ನದಿಗಳಂತಾಗಿ ಹರಿದರೆ, ತಗ್ಗು ಪ್ರದೇಶಗಳು ಜಲಾವೃತಗೊಂಡು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.

ಮಳೆಯ ರಭಸಕ್ಕೆ ನಗರದ ಅನೇಕ ಬಡಾವಣೆಗಳು ಮತ್ತು ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡವು. ಹರಳಯ್ಯ ಕಾಲೋನಿಯಲ್ಲಿನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ

ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ಮನೆಯೊಳಗೆ ನುಗ್ಗಿದ ನೀರನ್ನು ಪಾತ್ರೆಗಳು ಹಾಗೂ ಬಕೆಟ್‌ಗಳ ಮೂಲಕ ಹೊರ ಹಾಕಲು ಮಹಿಳೆಯರು ಮತ್ತು ಕುಟುಂಬಸ್ಥರು ಹರಸಾಹಸ ಪಟ್ಟ ದೃಶ್ಯಗಳು ಕಂಡುಬಂದವು.