ಬಿಜೆಪಿಯವರಿಗೆ ಸೀರೆ, ಹೂ ಕೊಟ್ಟ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು
ಬೆಳಗಾವಿ: ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌಲ್ಯ ಕುಸಿದು ಬಿಜೆಪಿಯ ಪ್ರಸ್ತುತತೆ ಮರೆ ಆಗುತ್ತಿರುವ ವೇಳೆ ಬಿಜೆಪಿ ಪಾಳಯ ರಾಹುಲ್ ಗಾಂಧಿ ವಿರುದ್ಧ ಪ್ರಚಾರ ಆರಂಭಿಸಿದ್ದು, ರಾಹುಲ್ ಗಾಂಧಿ ಅವರನ್ನು ರಾವಣನಂತೆ ಬಿಂಬಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಖೇನ ಅವರ ಜೀವಕ್ಕೆ ಅಪಾಯವನ್ನುಂಟು ಮಾಡುವ ಕರೆಯನ್ನು ಬಿಜೆಪಿ ಕೊಟ್ಟಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಾವಣ ಫೋಸ್ಟರ್ ಮೂಲಕ ಬಿಜೆಪಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ನಗರದ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ, ಮಾಧ್ಯವದವರೊಂದಿಗೆ ಮಾತನಾಡಿದ ಅವರು.
ರಾಹುಲ್ ಗಾಂಧಿ ಅವರನ್ನು ರಾವಣ ಫೋಸ್ಟರ್ ಮೂಲಕ ಬಿಜೆಪಿ ಅವಹೇಳನಕಾರಿಯಾಗಿ ಚಿತ್ರಿಸಿದ್ದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ದೇಶದ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಅವಕಾಶ ನೀಡುವುದಿಲ್ಲ. ಬಿಜೆಪಿಯ ಹಿಂಸಾಚಾರದ ಕರೆ ವಿರುದ್ಧ ದೇಶ, ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಆಯಿಶಾ ಸನದಿ ಮಾತನಾಡಿ, ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ರಾಹುಲ್ ಗಾಂಧಿಗೆ ಹೆದರುತ್ತಿದ್ದು, ಇದರಿಂದಾಗಿ ರಾಹುಲ್ ಅವರನ್ನು ರಾವಣನಂತೆ ಬಿಂಬಿಸಿ ಅವರ ಮೇಲೆ ದಾಳಿಗೆ ಕರೆ ನೀಡಿದ್ದಾರೆ ಎಂದು ಬಿಜೆಪಿ ವಿರುದ್ಧ ದೂರಿದರು.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಹುಲ್ ಗಾಂಧಿ ಅವರನ್ನು ರಾವಣ ಫೋಸ್ಟರ್ ಮೂಲಕ ಬಿಜೆಪಿ ಅವಹೇಳನಕಾರಿಯಾಗಿ ಚಿತ್ರಿಸಿದ್ದನ್ನು ಖಂಡಿಸಿ, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬಿಜೆಪಿ ಮುಖಂಡರಿಗೆ ಸೀರೆ, ಬಳೆ, ಹೂವುಗಳು ನೀಡುತ್ತೇವೆಂದು ಕೈಯಲ್ಲಿ ಹಿಡಿದು ಪ್ರದರ್ಶಿಸಿ, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉಮೇಶ ಬಾಳಿ, ಬಸವರಾಜ ಶೇಗಾಂವಿ, ರಾಜಾ ಸಲೀಂ, ಸೈಯದ್ ಮನಸೂರ, ಅನಂತಕುಮಾರ ಬ್ಯಾಕೂಡ, ಸರಳಾ ಸಾತ್ಪುತ್ರೆ ಸೇರಿದಂತೆ ಅನೇಕರು ಇದ್ದರು.


