ಶಕ್ತಿ ಯೋಜನೆ ಎಫೆಕ್ಟ್ ; ಸಾರಿಗೆ ನೌಕರರ ಸಂಬಳಕ್ಕೂ ಹಣವಿಲ್ಲದೆ ಪರದಾಟ
ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಎಫೆಕ್ಟ್ ನಿಂದಾಗಿ ಸಧ್ಯ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಇದರಿಂದ ಜನ ಖುಷಿಯಾಗಿದ್ದರು ನೌಕರರು ಸಂಕಷ್ಟ ಪಡುವಂತಾಗಿದೆ.
ಹೌದು ಈಗಾಗಲೇ ರಾಜ್ಯಾದ್ಯಂತ ಶಕ್ತಿ ಯೋಜನೆ ಅಡಿಯಲ್ಲಿ ಕೋಟ್ಯಾಂತರ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ರೂ. ಹಣ ಸಾರಿಗೆ ಇಲಾಖೆಗೆ ನಷ್ಟ ಉಂಟುಮಾಡುತ್ತಿದ್ದು ಸರ್ಕಾರ ಈ ಹಣವನ್ನು ಇಲಾಖೆಗೆ ನೀಡುತ್ತಿಲ್ಲ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ನೌಕರರಿಗೆ ಸಂಬಳ ಸಮಸ್ಯೆ ಎದುರಾಗಿದೆ.
ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಸುಮಾರು 22 ಸಾವಿರ ಸಾರಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಧ್ಯ ಎಲ್ಲರ ವೇತನಕ್ಕೆ 77 ಕೋಟಿ ಪ್ರತಿ ತಿಂಗಳು ಇಲಾಖೆ ಕೊಡಬೇಕು. ಮೊದಲಿಗೆ ಪ್ರತಿದಿನ 5 ಕೋಟಿ ರೂ. ಆದಾಯ ಬರುತ್ತಿತ್ತು. ಸಧ್ಯ ಶಕ್ತಿ ಯೋಜನೆಯಿಂದಾಗಿ ಇದರ ಪ್ರಮಾಣ ಕಡಿಮೆಯಾಗಿದೆ.
ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೆ 126 ಕೋಟಿ ರೂ.ಗಳನ್ನು ಸರ್ಕಾರ ಸಾರಿಗೆ ಇಲಾಖೆಗೆ ಕೊಡಬೇಕಾಗಿದೆ. ಆದರೆ ಈವರೆಗೂ ಬಾಕಿ ಹಣ ಕೊಟ್ಟಿಲ್ಲ. ಕೇವಲ 37 ಕೋಟಿ ಕೊಡಲು ಸರ್ಕಾರ ಅನುಮತಿ ನೀಡಿದ್ದು ಇದರಿಂದ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಅಡಚಣೆ ಉಂಟಾಗುತ್ತಿದೆ.


