ಕೇಂದ್ರ ಸಚಿವ ಗಡ್ಕರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್ ; ಎನ್ಐಎ ವಶಕ್ಕೆ ಕೈದಿ
ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆದರಿಕೆ ಪ್ರಕರಣಕ್ಕೆ ತಿರುವು : ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಅಫ್ಸರ್ ಫಾಷಾ ಎನ್‌ಐಎ ವಶಕ್ಕೆ
ಬೆಳಗಾವಿ : ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನೀತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಹೊಸ ತಿರುವು ಪಡೆದಿದ್ದು, ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಅಫ್ಸರ್ ಫಾಷಾ ಎಂಬ ಕೈದಿಯನ್ನು ಎನ್ಐಎ ಅಧಿಕಾರಿಗಳು ಬೆಳಗಾವಿ ಹಿಂಡಲಗಾ ಜೈಲಿನಿಂದ ಕರೆದೊಯ್ದಿದ್ದಾರೆ.
ಕೇಂದ್ರ ಹೆದ್ದಾರಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಹೋದ ಹಿನ್ನಲೆಯಲ್ಲಿತನಿಖೆ ನಡೆಸಿದ್ದ ಅಧಿಕಾರಿಗಳು, ಅಂತರಾಷ್ಟ್ರೀಯ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೋಯ್ಬಾ ಜೊತೆಗೆ ನಂಟು ಹೊಂದಿದ್ದ ಆರೋಪದಡಿ ಬಂಧಿತನಾಗಿದ್ದ ಅಪ್ಸರ್ ಫಾಷಾ ಎಂಬ ಆರೋಪಿಯನ್ನು ಸಧ್ಯ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ಮುಂಬೈ ಗೆ ಕರೆದೊಯ್ದಿದ್ದಾರೆ.
ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಮಂಗಳೂರು ಮೂಲದ ಜಯೇಶ ಪೂಜಾರಿ, ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ೨೦೨೩, ಜ.೧೪ರಂದು ಕರೆ ಮಾಡಿ ₹೧೦೦ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಒಂದು ವೇಳೆ ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.
ಆದರೆ ಈ ಘಟನೆ ಮಾಸುವ ಮುನ್ನವೇ ೨೦೨೩, ಮಾ.೨೧ರಂದು ಎರಡನೇ ಬಾರಿಗೆ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನ ಹೆಸರಿನಲ್ಲಿ ಮಹಾರಾಷ್ಟ್ರದ ನಾಗ್ಪುರದ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ₹೧೦ ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಜಯೇಶ್ ಪೂಜಾರಿ ಇರುವ ಹಿಂಡಲಗಾ ಕಾರಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಗಡ್ಕರಿಗೆ ಬೆದರಿಕೆ ನೀಡಿದ ಪ್ರಕರಣದ ತನಿಖೆ ವೇಳೆ ಜಮ್ಮು ಕಾಶ್ಮೀರದಲ್ಲಿ ಲಷ್ಕರ್ ಎ- ತೊಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಜಯೇಶ ಪೂಜಾರಿ ಸಂಪರ್ಕದಲ್ಲಿದ್ದ ಹಾಗೂ ಅವರಿಗೆ ಸಹಾಯ ಮಾಡಿದ್ದ ಕೇಸಲ್ಲಿ ಬಂಧಿತನಾಗಿರುವ ಪಾಷಾ ಜತೆ ಪೂಜಾರಿ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ.
೨೦೦೫ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಈ ಪಾಷಾ ಭಾಗಿಯಾಗಿದ ಆರೋಪವಿದೆ. ಈ ಹಿನ್ನಲೆಯಲ್ಲಿ ಎನ್ ಐ ಎ ಅಧಿಕಾರಿಗಳು ಪಾಷಾನನ್ನು ವಶಕ್ಕೆ ಪಡೆದಿದ್ದಾರೆ.

