ರಾಯಬಾಗ : ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ಅಪಾರ ಶೌರ್ಯ, ಸಾಹಸ ಪ್ರದರ್ಶಿಸಿ ದೇಶದ ಗಡಿ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಅವರ ತ್ಯಾಗ ಮತ್ತು ಬಲಿದಾನವನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಲೇಖಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಣಯ ಪಾಟೀಲ್ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿ ರಸ್ತೆಯಲ್ಲಿರುವ ಸೈನಿಕ ಸಂಘಟನೆಯ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಅವಿಸ್ಮರಣೀಯ ಕ್ಷಣ. ಜಗತ್ತಿಗೆ ನಮ್ಮ ದೇಶದ ಶಕ್ತಿ ತೋರಿಸಿದ ವೀರ ಯೋಧರೇ ನಿಜವಾದ ಹೀರೋಗಳು ಎಂದರು.
ತಹಸೀಲ್ದಾರ ಮಹದೇವ ಸನ್ಮೂರಿ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ಜೀವದ ಹಂಗು ತೊರೆದು ದೇಶದ ಅಖಂಡತೆಯನ್ನು ಕಾಪಾಡಿದರು. ಅವರ ಸಾಹಸ ಮತ್ತು ತ್ಯಾಗದಿಂದಲೇ ಇಂದು ದೇಶ ಸುರಕ್ಷಿತವಾಗಿದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯರೂ ಸೈನಿಕರ ಸೇವೆ ಮತ್ತು ಬಲಿದಾನವನ್ನು ಗೌರವಿಸಿ, ಕಾರ್ಗಿಲ್ ಹುತಾತ್ಮರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ರಾಯಬಾಗ ಸಿಪಿಐ ಎಂ.ಎಂ. ಡಫಿನ್ ಕಾರ್ಗಿಲ್ ವಿಜಯೋತ್ಸವದ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಕುಟುಂಬಸ್ಥರಿಗೆ ಸತ್ಕರಿಸಲಾಯಿತು.ಇದೆ ಸಂದರ್ಭದಲ್ಲಿ ಸೈನಿಕ ಸಂಘದ ತಾಲೂಕಾ ಅಧ್ಯಕ್ಷ ತಮ್ಮಾಣ್ಣಿ ಸರಿಕರ, ವಸಂತ ಕಾಂಬಳೆ, ಶಿವಾನಂದ ದಂಡಾಪುರೆ, ವೃಷಭ ಮಗದುಮ್, ಕೃಷ್ಣಾ ಮಾನೆ, ಮಂಜುನಾಥ ಕಮಲಾಕ್ಷಿ, ಗೋಪಾಲ ಪೂಜೇರಿ, ರಾಜು ಮೇತ್ರಿ, ಲಕ್ಶ್ಮಣ ಪಾಟೀಲ, ಮಲ್ಲೇಶ ದೊಡಮನಿ ಸೇರಿ ಸೈನಿಕ ಸಂಘಟನೆಯ ಪದಾಧಿಕಾರಿಗಳು, ಮಾಜಿ ಯೋಧರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


