ನಿನ್ನೆ ಆಕ್ರೋಶ ; ಇಂದು ಅಪ್ಪುಗೆ – ಯಾರು ತಿಳಿಯರು ಈ ಸಾಹುಕಾರರ ಆಟ…? Video
ಬೆಳಗಾವಿ : ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿ ಒಂದು ಫೋಸ್ಟ್ ಹಾಕಿದ್ದರು. ಆದರೆ ಇಂದು ಅದೇ ಜಾರಕಿಹೊಳಿ ಮನೆತನದ ಸಹೋದರನನ್ನು ತಬ್ಬಿಕೊಂಡಿದ್ದು ನೋಡಿದರೆ ಯಾರು ತಿಳಿಯರು ಇವರ ಆಟ ಎಂಬಂತಾಗಿದೆ ಕಾರ್ಯಕರ್ತರ ಪರಿಸ್ಥಿತಿ.
ಹೌದು ಇಂದು ಬೆಳಗಾವಿ ನಗರದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕೈ ಹಿಡಿದು ಮಾತನಾಡಿದ್ದು ವಿಶೇಷವಾಗಿತ್ತು. ಈ ವೇಳೆ ರಮೇಶ್ ಕತ್ತಿ ಗೋಕಾಕ್ ಸಾಹುಕಾರನನ್ನು ತಬ್ಬಿಕೊಂಡು ತಮ್ಮ ಸ್ನೇಹ ಪ್ರದರ್ಶನ ಮಾಡಿದ್ದರು.
ನಿನ್ನೆ ಇದೇ ರಮೇಶ್ ಕತ್ತಿ ಸಾಮಾಜಿಕ ಜಾಲತಾಣದಲ್ಲಿ ಯಮಕನಮರಡಿ ಕ್ಷೇತ್ರದ ಕುರಿತು ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ನಿಮ್ಮ ಜೊತೆ ನಾನು ಇದ್ದೇನೆ ಎಂದು ಫೋಸ್ಟ್ ಹಾಕಿದ್ದರು. ಈ ಕ್ಷೇತ್ರ ಶಾಸಕ ಸತೀಶ್ ಜಾರಕಿಹೊಳಿ ಪ್ರತಿನಿಧಿಸುತ್ತಾರೆ.
ಒಟ್ಟಾರೆಯಾಗಿ ಈ ರಾಜಕಾರಣಿಗಳು ಯಾವ ಸಂದರ್ಭದಲ್ಲಿ ಹೇಗೆ ಇರುತ್ತಾರೆ ಎಂದು ಅವರ ಬೆಂಬಲಿಗರು ಊಹಿಸಲು ಅಸಾಧ್ಯ. ರಮೇಶ್ ಕತ್ತಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

