ಬೆಳಗಾವಿ: ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅರ್ಜುನ್ ರಾಠೋಡ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಬೆಳಗಾವಿ ಜಿಲ್ಲಾ ಬಂಜಾರ ಸಮಾಜದ ಮುಖಂಡ ಮಂಜುನಾಥ್ ಪಮ್ಮಾರ ಒತ್ತಾಯಿಸಿದ್ದಾರೆ.

ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಅರ್ಜುನ್ ರಾಠೋಡ್ ಅವರು ಪಕ್ಷದ ಸಂಘಟನೆ ಹಾಗೂ ಜನಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಹಲವು ಸಮಾಜಮುಖಿ ಹಾಗೂ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಎಪಿಎಂಸಿ ಅಧ್ಯಕ್ಷರಾಗಿ ರೈತರ ಪರವಾಗಿ ಕಾರ್ಯನಿರ್ವಹಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಅಲ್ಲದೆ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾಗಿ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಗಲಕೋಟ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹ ಅವರು ಪ್ರಮುಖವಾಗಿ ಶ್ರಮಿಸಿದ್ದಾರೆ.

ವಿಜಯಪುರ ಜಿಲ್ಲೆಯ ಲೋಕಸಭಾ ಹಾಗೂ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಆಕಾಂಕ್ಷಿಯಾಗಿದ್ದರೂ, ಟಿಕೆಟ್ ದೊರೆಯದ ಸಂದರ್ಭದಲ್ಲಿ ಪಕ್ಷದ ತೀರ್ಮಾನವನ್ನು ಗೌರವಿಸಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವುದು ಅವರ ಪಕ್ಷನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಮಂಜುನಾಥ್ಪಮ್ಮಾರ ತಿಳಿಸಿದ್ದಾರೆ.

ಸಂದರ್ಭದಲ್ಲಿ ಶ್ರೀ ಕೃಷ್ಣ ರಾಠೋಡ, ವಿಷ್ಣು ಕಾರಭಾರಿ, ಶ್ರೀ ರಾಜು ರಾಠೋಡ, ದೇವೇಂದ್ರ ನಾಯಕ, ಶರದ ಪವಾರ, ವಿಷ್ಣು ಜಯರಾಮ್ ಲಮಾಣಿ, ಆನಂದ ನಾಯಕ ಹಾಗೂ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.