ಬೆಳಗಾವಿ : ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ನಿರಂತರ ಮಳೆಯಿಂದ ನಿಲ್ಲಿಸಿದ್ದ ಬೈಕ್ ಹರಿದು ಹೋಗಿದ್ದು ವಾಹನ ಸವಾರರು ಪರದಾಡಿದ ಪರಿಸ್ಥಿತಿ ನಿರ್ಮಾಣವಾಯಿತು.

ನಗರದಲ್ಲಿ  ಸೋಮವಾರ ಮಧ್ಯಾಹ್ನ ಏಕಾಏಕಿ ಸುರಿದ ಮೇಘಸ್ಫೋಟದಂತ ಭಾರೀ ಮಳೆಯು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.

ಕೆಲವೇ ನಿಮಿಷಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ನದಿಗಳಂತಾಗಿ ಹರಿದರೆ, ತಗ್ಗು ಪ್ರದೇಶಗಳು ಜಲಾವೃತಗೊಂಡು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.

ಮಳೆಯ ರಭಸಕ್ಕೆ ನಗರದ ಅನೇಕ ಬಡಾವಣೆಗಳು ಮತ್ತು ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡವು. ಹರಳಯ್ಯ ಕಾಲೋನಿಯಲ್ಲಿನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.

ಮನೆಯೊಳಗೆ ನುಗ್ಗಿದ ನೀರನ್ನು ಪಾತ್ರೆಗಳು ಹಾಗೂ ಬಕೆಟ್‌ಗಳ ಮೂಲಕ ಹೊರ ಹಾಕಲು ಮಹಿಳೆಯರು ಮತ್ತು ಕುಟುಂಬಸ್ಥರು ಹರಸಾಹಸ ಪಟ್ಟ ದೃಶ್ಯಗಳು ಕಂಡುಬಂದವು.
 ಬಸ್ ನಿಲ್ದಾಣದ ಬಳಿ ನೀರಿನ ಹರಿವು ಅಪಾರ

ಪ್ರಮಾಣದಲ್ಲಿ ಹೆಚ್ಚಾಗಿ ನಿಲ್ಲಿಸಿದ್ದ ಕೆಲ ಬೈಕ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ತಟವಟಿ ಹೀರೋ ಶೋ ರೂಂ ಆವರಣವೂ ಸಂಪೂರ್ಣ ನೀರಿನಿಂದ ಆವೃತಗೊಂಡು ಆಸ್ತಿಪಾಸ್ತಿಗೆ ತುಸು ಹಾನಿಯಾಗಿದೆ.