ಬೆಳಗಾವಿ : “ರಾಮ ನಮ್ಮ ಬಳಿ ಇಲ್ಲವೇ? ಎಲ್ಲಾ ಧರ್ಮದವರು ನಮ್ಮಲ್ಲಿದ್ದಾರೆ. ನಾವು ಎಲ್ಲಾ ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದೇವೆ. ಬಿಜೆಪಿಯವರು ಮನೆ ಮನೆಗೆ ಮಂತ್ರಾಕ್ಷತೆ ಹಂಚಿದರು. ಈ ಅಕ್ಷತೆ ಅಯೋಧ್ಯೆಯ ರಾಮಮಂದಿರದಿಂದ ಬಂದಿದ್ದು ಎಂದು ಹೇಳಿದರು. ಅದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ. ನಾವು ಕೊಟ್ಟಂತಹ ಅನ್ನ ಭಾಗ್ಯ ಅಕ್ಕಿಗೆ ಅರಿಶಿನ ಕುಂಕುಮ ಹಾಕಿ ಅದನ್ನು ಮಂತ್ರಾಕ್ಷತೆ ಎಂದು ಹಂಚಿದರು” ಎಂದು ಸಿಎಂ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು‌ ಉದ್ದೇಶಿಸಿ ಮಾತನಾಡಿದರು. “ಇಡೀ ದೇಶದ ಜನರ ಭಾವನೆಗೆ ಧಕ್ಕೆಯಾಗಿದೆ. ನಂಬಿಕೆಗೆ ಸ್ವಾಭಿಮಾನಕ್ಕೆ ದ್ರೋಹ ಎಸೆಗಲಾಗಿದೆ. ನೀವು ಸೇರಿದಂತೆ ಈ ದೇಶದ ಎಷ್ಟೋ ಜನ ರಾಮಮಂದಿರಕ್ಕೆ ಸಣ್ಣ ಕಾಣಿಕೆ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಕಾಣಿಕೆ ಕೊಟ್ಟಿದ್ದಾರೆ. ಆದರೆ ಅಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ತಿಳಿದುಕೊಂಡಿದ್ದೀರಿ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಮಾಧ್ಯಮಗಳಲ್ಲಿ ಅಯೋಧ್ಯೆಯಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ” ಎಂದರು.