ಕೇಂದ್ರದಿಂದ ಹಿಟ್ಲರ್ ರೀತಿಯ ಆಡಳಿತ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ
ಬೆಳಗಾವಿ : ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚಿಸಲು ಸರ್ವ ಪಕ್ಷಗಳ ಸಭೆ ಕರೆಯದೆ, ಹಿಟ್ಲರ್ ಮಾದರಿ ಡಳಿತದಂತೆ ಕೇಂದ್ರ ಸರಕಾರ ಏಕಾಏಕಿ ಮಸೂದೆ ಮಂಡನೆ ಮಾಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹರಿಹಾಯ್ದರು.
ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಭದ್ರತೆ ನೀಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಉನ್ನತ ಹುದ್ದೆಗಳನ್ನು ಮೊದಲಬಾರಿಗೆ ಮಹಿಳೆಯರಿಗೆ ನೀಡಿರುವ ಕೀರ್ತಿ ನಮ್ಮ ಪಕ್ಷಕ್ಕೆ ಸೇರಿದೆ. ಆದರೆ ಚುನಾವಣಾ ಲಾಭಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡುತ್ತಿದೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ. ಯುಪಿಎ ಸರಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣವನ್ನು 50 ಕ್ಕೆ ಏರಿಸುವ ನಿರ್ಧಾರ ಮಾಡಲಾಗಿದೆ. 2023 ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲ ನೀಡಿ ಮಸೂದೆ ಪಾಸ್ ಮಾಡಿದರೂ ಮೂರು ವರ್ಷಗಳ ನಂತರ ಚುನಾವಣೆ ಸಂದರ್ಭದಲ್ಲಿ ಮತ್ತೊಮ್ಮೆ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡಿದ್ದು ಕ್ಷೇತ್ರ ಮರುವಿಂಡನೆ ಲಾಭ ಪಡೆಯಲು ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿ ಇರುವುದರಿಂದ ಕೇಂದ್ರ ಸರಕಾರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಬೇಕಾಗಿತ್ತು. ಆದರೆ ತಾವು ಯಾವುದೇ ನಿರ್ಧಾರ ತಗೆದುಕೊಂಡರೂ ರಾಜ್ಯಗಳು ಅದನ್ನು ಒಪ್ಪಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಸರಕಾರ ಹೊಂದಿದೆ. ಕ್ಷೇತ್ರ ಮರುವಿಂಗಡನೆ ಮಾಡುವ ಉದ್ದೇಶಕ್ಕಾಗಿ ಮಹಿಳಾ ಮೀಸಲಾತಿ ಮಸೂದೆ ಮುಖವಾಡ ಹಾಕಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹರಿಹಾಯ್ದರು.


