ಪ್ರಾಮಾಣಿಕ ರಾಜಕಾರಣ ಅಸಾಧ್ಯ ; ನಿವೃತ್ತಿ ಮಾತನಾಡಿದ ಯತ್ನಾಳ್…!
ವಿಜಯಪುರ : ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಈಗ ಆಸಕ್ತಿ ಇಲ್ಲ. ಇದೇ ಕಾರಣಕ್ಕೆ ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇವರು.
ರಾಜ್ಯ ರಾಜಕಾರಣದಲ್ಲಿ ಆರಾಮವಾಗಿರವೆ. ನನಗೆ ಕೇಂದ್ರಕ್ಕೆ ಹೋಗುವ ಆಸಕ್ತಿ ಹಾಗೂ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ವಂಶಪರಂಪರೆ ರಾಜಕೀಯ ಮುಗಿಯಬೇಕಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ನನ್ನ ಕೊನೆ ಚುನಾವಣೆ ಎಂದರು.
ಚುನಾವಣೆ ಮಾಡಲು ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸಬೇಕು. ಇಂತವೆಲ್ಲ ಮಾಡಲಾಗದಿದ್ದರೆ ರಾಜಕಾರಣ ಮಾಡಲಾಗಲ್ಲ. ಇದರೊಂದಿಗೆ 2028 ರ ವಿಧಾನಸಭೆ ಚುನಾವಣೆ ಬಳಿಕ ಪರೋಕ್ಷವಾಗಿ ಸಕ್ರಿಯ ರಾಜಕೀಯ ನಿವೃತ್ತಿ ಎಂದು ಘೋಷಿಸಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದೀಗೌಡರ ಸಮರ್ಥರಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಅಲ್ಲಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ಬೀದರ ಕ್ಷೇತ್ರದಿಂದಲೂ ಸ್ಪರ್ಧಿಸಲು ಕೆಲವರು ಮನವಿ ಮಾಡಿದ್ದು, ಅಲ್ಲಿಯೂ ಸಮರ್ಥರಿದ್ದಾರೆ ಎಂದು ಇಂಥ ಸುದ್ದಿಗಳಿಗೆ ಸಮಜಾಯಿಸಿ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಯಲಬುರ್ಗಾದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಆಳಂದ ಶಾಸಕ ಬಿ.ಆರ್.ಪಾಟೀಲ ಕೂಡ ಸತ್ಯವನ್ನೇ ಹೇಳಿದ್ದಾರೆ ಎಂದು ಅಭಿಪ್ರಾಯಪಟ್ಟರು.


