Breaking : ಟ್ರ್ಯಾಕ್ಟರ್ ಹರಿಸಿ ಸ್ವಂತ ಸಹೋದರನನ್ನೇ ಕೊಲೆಗೈದ ಅಣ್ಣ
ಯರಗಟ್ಟಿ : ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಘಟನೆ ಯರಗಟ್ಟಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ ಜಮೀನಿನಲ್ಲಿ ಗೋಪಾಲ ಬಾವಿಹಾಳ (27) ನನ್ನು ಹತ್ಯೆ ಮಾಡಲಾಗಿದೆ. ಮಾರುತಿ ಬಾವಿಹಾಳ (30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ ಎಂದು ತಿಳಿದುಬಂದಿದೆಮ
ಆಸ್ತಿ ವಿಚಾರಕ್ಕೆ ಗೋಪಾಲ ಮತ್ತು ಮಾರುತಿ ನಡುವೆ ಜಗಳ ಆಗಿತ್ತು. ಕುಡಿದ ಅಮಲಿನಲ್ಲಿ ಮೃತ ಗೋಪಾಲ ಸಹೋದರರ ಜೊತೆ ಜಗಳ ಮಾಡುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕುಟುಂಬಗಳು ಆಸ್ತಿ ಭಾಗ ಮಾಡಿಕೊಂಡಿದ್ದರು. ನಂತರ ಮತ್ತೆ ಸಹೋದರರ ಜೊತೆ ಗೋಪಾಲ ಜಗಳ ಮಾಡುತ್ತಿದ್ದ.
ಮೃತ ಗೋಪಾಲನ ತಂದೆಗೆ ಮೂವರು ಮಕ್ಕಳು. ಮೊನ್ನೆಯಷ್ಟೇ ಆಸ್ತಿ ಪಾಲ ಮಾಡಿದ ಸಂದರ್ಭದಲ್ಲಿ ಮೂವರಿಗೂ ಒಂದೊಂದು ಟ್ರ್ಯಾಕ್ಟರ್ ಬಂದಿದ್ದವು. ಆದರೆ ತನ್ನ ಪಾಲಿಗೆ ಬಂದ ಟ್ರ್ಯಾಕ್ಟರ್ ಅನ್ನು ಗೋಪಾಲ ಹೆಂಹತಿ ಮನೆಯಲ್ಲಿ ಬಿಟ್ಟಿದ್ದ. ಇದೇ ಕಾರಣಕ್ಕೆ ಗೋಪಾಲ ಹಾಗೂ ಮಾರುತಿ ನಡುವೆ ಜಗಳ ನಡೆದಿತ್ತು.
ಗೋಪಾಲ ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಬೈಕ್ ಮೇಲೆ ಬರುವಾಗ ಟ್ರಾಕ್ಟರ್ ನಿಂದ ಡಿಕ್ಕಿ ಮಾಡಿದ್ದು, ಈ ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರಾಕ್ಟರ್ ಹಾಯಿಸಿ ಮಾರುತಿ ಹತ್ಯೆ ಮಾಡಿ ನಂತರ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


