ರೈಲ್ವೆ ಇಂಜಿನ್ – ಕೋಚ್ ಮಧ್ಯೆ ಸಿಲುಕಿ ಅಪ್ಪಚ್ಚಿಯಾದ ಉದ್ಯೋಗಿ
ಬಿಹಾರ : ಇಂಜಿನ್ ಹಾಗೂ ಕೋಚ್ ಮಧ್ಯೆ ಸಿಲುಕಿ ರೈಲ್ವೆ ನೌಕರನೋರ್ವ ಮೃತಪಟ್ಟ ಘಟನೆ ಬಿಹಾರದ ಗುಸರಾಯ್ನ ಬರೌನಿ ಜಂಕ್ಷನ್ನಲ್ಲಿ ನಡೆದಿದೆ.
ಅಮರ್ ಕುಮಾರ್ ರಾವ್(25) ಮೃತ ಕಾರ್ಮಿಕ. ಸೊನಾಪುರ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಚಾನಕ್ಕಾಗಿ ಸಂಭವಸಿದ ದುರ್ಘಟನೆಯಲ್ಲಿ ಸಾವಣಪ್ಪಿದ್ದಾರೆ.
ಲಕ್ನೋ-ಬರೌನಿ ಎಕ್ಸ್ಪ್ರೆಸ್ (ಸಂಖ್ಯೆ: 15204) ಲಕ್ನೋ ಜಂಕ್ಷನ್ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್ನ 5 ನೇ ಪ್ಲಾಟ್ಫಾರ್ಮ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಮೃತಪಟ್ಟಿದ್ದಾರೆ.
ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿದ್ದಾರೆ. ಪರಿಣಾಮ ಅವರ ದೇಹ ಅಪ್ಪಚ್ಚಿಯಾಗಿದೆ.
ಭಯಾನಕ ಘಟನೆಯನ್ನು ನೋಡಿದ ಪ್ರಯಾಣಿಕರು ಬೊಬ್ಬೆ ಹಾಕಿದ್ದಾರೆ. ರೈಲು ಚಾಲಕ ರೈಲಿನಿಂದ ಇಳಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.


