BREAKING – ಸಿಎಂ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್ ಶಾಸಕ ನಿಧನ
ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ Surapura ಕ್ಷೇತ್ರದ ಶಾಸಕ, ಕಾಂಗ್ರೆಸ್ ನಾಯಕ ರಾಜಾ ವೆಂಕಟಪ್ಪ ನಾಯಕ ( Raja venkatappa Nayak ) ಅವರು ರವಿವಾರ (ಫೆ.25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 67 ವರ್ಷದ ರಾಜಾ ವೆಂಕಟಪ್ಪ ನಾಯಕ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ಬಾರಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ( Mallikarjun karge ) ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡ ಅಪರೂಪದ ನಾಯಕರಾಗಿದ್ದರು. ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ರಾಜಾ ವೆಂಕಟಪ್ಪ ನಾಯಕ ಇತ್ತೀಚೆಗಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಮೃತರಿಗೆ ಇಬ್ಬರು ಪುತ್ರರು ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ನಿಧನದಿಂದ ಸುರಪುರ ತಾಲೂಕು ಕಂಬನಿಯಲ್ಲಿ ಮುಳುಗಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ :ಶಾಸಕ ವೆಂಕಟಪ್ಪ ನಾಯಕ ಅವರ ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂತಾಪ ನುಡಿಗಳು
ಬಹಳ ಸಂಭಾವಿತ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆಯೇ ಹೆಚ್ಚೆಚ್ಚು ಕಾಳಜಿ ವಹಿಸಿದ್ದರು. ಸೋತಾಗಲೂ ಜನರ ನಡುವೆಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ವೇರ್ ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನನಗಿದೆ.
ಮೊನ್ನೆ ಸ್ವಲ್ಪ ಗುಣಮುಖರಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.
ಶಾಸಕರ ನಿಧನದ ಹಿನ್ನೆಲೆಯಲ್ಲಿ ಸೋಮವಾರದ ಅಧಿವೇಶನವನ್ನು ಸಂತಾಪ ಸೂಚಕವಾಗಿ ಒಂದು ದಿನ ಮುಂದೂಡಲಾಗುವುದು. ಮಂಗಳವಾರ ರಾಜ್ಯಸಭಾ ಚುನಾವಣೆ ಇರುವುದರಿಂದ ಬುಧವಾರಕ್ಕೆ ಅಧಿವೇಶನ ಮುಂದೂಡಬೇಕಾಗುತ್ತದೆ ಎಂದು ಸಿಎಂ ತಿಳಿಸಿದರು.


