
ಚಾಮರಾಜನಗರ – ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ

ಮೈಸೂರು : ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಸೋಮವಾರ ನಸುಕಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಲವು ದಶಕಗಳಿಂದ ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದ ಇವರು ರಾಜಕೀಯಕ್ಕೆ ವಿದಾಯ ಹೇಳಿದ್ದರು. ಜೊತೆಗೆ ತಾವು ಈ ಬಾರಿ ಯಾರ ಪರವಾಗಿ ಪ್ರಚಾರ ಮಾಡದಿರುವ ನಿರ್ಧಾರ ಮಾಡಿದ್ದರು.
ಮೈಸೂರು ಭಾಗದಲ್ಲಿ ತಮ್ಮದೇ ಛಾಪು ಹೊಂದಿದ್ದ ಪ್ರಸಾದ ಅವರು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದಲೂ ರಾಜಕಾರಣ ಮಾಡಿದರು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು.
2013 ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2016 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಸಚಿವ ಸ್ಥಾನದಿಂದ ಕೈಬಿಟ್ಟಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್‌ಗೆ ವಿದಾಯ ಹೇಳಿ ಬಿಜೆಪಿ ಸೇರಿದರು.
ಅವರು ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಿ 2017 ರಲ್ಲಿ ಸೋತರು. ನಂತರ, 2019 ರಲ್ಲಿ ನಡೆದ ಚಾಮರಾಜನಗರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದರು. ಕಳೆದ ವರ್ಷ ತಮ್ಮ 75 ನೇ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಆಚರಿಸುತ್ತಿದ್ದಾಗ ನಿವೃತ್ತಿ ಬಗ್ಗೆ ಮಾತನಾಡಿದ್ದರು.