ದೆಹಲಿ ದಂಡಯಾತ್ರೆಗೆ ಹೊರಡುವ ಸಾಹುಕಾರ್ ಸತೀಶ್ ; ಏನು ಕಾರಣ…?
ಬೆಂಗಳೂರು : ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ಕಾಂಗ್ರೆಸ್ ಹೈಕಮಾಂಡ್ ನಡೆಯಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಸಧ್ಯ ಭಯದ ವಾತಾವರಣ ಆವರಿಸಿದಂತಾಗಿದೆ. ಯಾವೊಬ್ಬ ಸಚಿವರು ಈ ಕುರಿತು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದ ಸಚಿವ ಕೆ.ಎನ್ ರಾಜಣ್ಣ ಅವರನ್ನು ವಜಾ ಮಾಡಿದ್ದು ಸಮುದಾಯದ ಜನ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಇದೇ ಸಮುದಾಯಕ್ಕೆ ಸೇರಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಆಕ್ಟಿವ್ ಆಗಿದ್ದಾರೆ.
ಈಗಾಗಲೇ ಬಿ. ನಾಗೇಂದ್ರ ಅವರು ವಾಲ್ಮೀಕಿ ನಿಗಮದಲ್ಲಿ ಆದ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವಂತಾಗಿತ್ತು. ಈಗ ಹೈಕಮಾಂಡ್ ವಿರುದ್ಧ ಮಾತನಾಡಿ ರಾಜಣ್ಣ ವಜಾಗೊಂಡಿದ್ದಾರೆ. ಇಬ್ಬರೂ ವಾಲ್ಮೀಕಿ ನಾಯಕರೇ ಸಂಪುಟದಿಂದ ಹೊರಹೋಗುವಂತಾಗಿದೆ.
ಇದೇ ಕಾರಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ನಾಯಕರ ಸಭೆ ನಡೆಸಿದ್ದು, ಸಧ್ಯದಲ್ಲಿ ನಿಯೋಗ ಕರೆದುಕೊಂಡು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರು ಸಚಿವರ ರಾಜೀನಾಮೆಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಕಾರಣಕ್ಕೆ ಎರಡೂ ಖಾತೆಯನ್ನು ಸಮುದಾಯದ ಶಾಸಕರಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಕೊಡಿಸುವಂತೆ ಹೈಕಮಾಂಡ್ ನಾಯಕರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಯಲಿದೆ.


