
ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ; ಸಾಹುಕಾರ್ ಸತೀಶ್ ಸಿಟ್ಟಿಗೆ ಬಲಿಯಾಗುವವರು ಯಾರು…?

ಪದೇ ಪದೇ ಬೆಳಗಾವಿ ವಿಚಾರವಾಗಿ ಮೂಗು ತೋರಿಸುವ ಡಿ.ಕೆ ಶಿವಕುಮಾರ್ ಅವರ ನಡೆ, ಸಚಿವ ಸತೀಶ್ ಜಾರಕಿಹೊಳಿ ಅವರ ಸಿಟ್ಟಿಗೆ ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಒಂದು ವೇಳೆ ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ಮುನಿಸಿಕೊಂಡರೆ ಇದರ ನೇರ ಪರಿಣಾಮ ಆಗುವುದು ಸರ್ಕಾರದ ಮೇಲೆ.
ಹೌದು ಈ ಹಿಂದೆ ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿಚಾರವಾಗಿ ರಮೇಶ್ ಜಾರಕಿಹೊಳಿ ಮುನಿಸಿಕೊಂಡು ಕುಮಾರಸ್ವಾಮಿ ಸರ್ಕಾರಕ್ಕೆ ಕಂಟಕವಾಗಿದ್ದರು. ಆದರೆ ಸಧ್ಯದ ಮತ್ತೊಂದು ಬೆಳವಣಿಗೆಯಲ್ಲಿ ಡಿ.ಕೆ ಶಿವಕುಮಾರ್ ಅವರ ನಡೆಗೆ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಕಾಮಗಾರಿ ವಿಚಾರವಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಗರಂ ಆಗಿದ್ದಾರೆ. ವಿನಾಕಾರಣ ಬೆಳಗಾವಿ ವಿಷಯದಲ್ಲಿ ಡಿಕೆಶಿ ಕೈ ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು ಇದರಿಂದ ಸರ್ಕಾರದ ವಿರುದ್ಧ ಸತೀಶ್ ಜಾರಕಿಹೊಳಿ ಒಂದು ರೀತಿಯಲ್ಲಿ ಮನಸ್ತಾಪ ಹೊಂದಿದ್ದು ಇದು ಯಾವ ಮಟ್ಟಿಗೆ ಹೋಗಬಹುದು ಎಂದು ಊಹಿಸಲು ಸಾಧ್ಯವಿಲ್ಲ.
ಕಳೆದ ಕೆಲ ದಿನಗಳ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಹೊಂದಾಣಿಕೆ ಕೊರತೆ ಇದೆ ಎಂಬ ಮಾತು ಕೇಳಿಬಂದಿದ್ದವು. ಇದಾದ ನಂತರ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಹೆಬ್ಬಾಳ್ಕರ್ ವಿರುದ್ಧ ಸಾಹುಕಾರ್ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಸಧ್ಯ ಈ ಎಲ್ಲಾ ಬೆಳವಣಿಗೆ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಶಾಸಕರ ತಂಡದೊಂದಿಗೆ ಮೈಸೂರು ದಸರಾ ನೋಡಲು ಹೊರಟಿದ್ದ ಸಾಹುಕಾರ್ : ಉತ್ತರ ಕರ್ನಾಟಕ ಭಾಗದ ಸುಮಾರು 20 ಕ್ಕೂ ಅಧಿಕ ಶಾಸಕರ ಜೊತೆಗೂಡಿ ಸಚಿವ ಸತೀಶ್ ಜಾರಕಿಹೊಳಿ ಮೈಸೂರು ದಸರಾಗೆ ತೆರಳಲು ಸಿದ್ದತೆ ನಡೆಸಿದ್ದರು ಆದರೆ ಹೈಕಮಾಂಡ್ ಇದಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಡಿಕೆಶಿ ವಿರುದ್ಧ ಸಾಹುಕಾರ್ ಹೊಂದಿರುವ ಈ ಸಿಟ್ಟು ಕಾಂಗ್ರೆಸ್ ಗೆ ಯಾವೆಲ್ಲ ರೀತಿಯಲ್ಲಿ ಸಂಕಷ್ಟ ತರಬಹುದು ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.