ಜನಮನ ಗೆದ್ದ ಎಸ್ಪಿ ಡಾ. ಸಂಜೀವ್ ಪಾಟೀಲ್ ವರ್ಗಾವಣೆ : ನಿಷ್ಠಾವಂತ ಕಾರ್ಯಕ್ಕೆ ಜಿಲ್ಲೆಯ ಜನರ ಕೃತಜ್ಞತಾ ಭಾವ
ಬೆಳಗಾವಿ : ಜನಸಾಮಾನ್ಯರ ಜೊತೆ ಪೊಲೀಸ್ ಇಲಾಖೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಮೂಲಕ ಜಿಲ್ಲೆಯ ಜನರ ಮನೆಮಾತಾಗಿದ್ದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ವರ್ಗಾವಣೆಯಾಗಿದ್ದಾರೆ.
ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದ ಡಾ. ಸಂಜೀವ್ ಪಾಟೀಲ್ ಕಡಿಮೆ ಅವಧಿಯಲ್ಲೇ ಬೆಳಗಾವಿ ಜನರ ಪಾಲಿಗೆ ಅತ್ಯಂತ ಇಷ್ಟದ ವ್ಯಕ್ತಿ ಹಾಗೂ ವ್ಯಕ್ತಿತ್ವವಾಗಿ ಹೊರಹೊಮ್ಮಿದವರು.
ದಕ್ಷ ಆಡಳಿತ ಮತ್ತು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇವರ ಪಾತ್ರ ಅಪಾರ. ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಮರ್ಥವಾಗಿ ಡಾ. ಸಂಜೀವ್ ಪಾಟೀಲ್ ನಿಭಾಯಿಸಿದ್ದರು.
ಅಷ್ಟೆ ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರಿಗೆ ಸೂಕ್ತ ಭದ್ರತೆ ಒದಗಿಸಿ ನಾಯಕರ ಮನಸ್ಸು ಗೆದ್ದಿದ್ದು ಇವರ ಮತ್ತೊಂದು ಮೈಲುಗಲ್ಲು.
ಇನ್ನೂ ಗಡಿ ಹಾಗೂ ಭಾಷೆ ವಿಚಾರವಾಗಿ ಅತ್ಯಂತ ಸೂಕ್ಷ್ಮವಾಗಿರುವ ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ಅತ್ಯಂತ ಚಾಣಾಕ್ಷತೆಯಿಂದ ಕೆಲಸ ನಿರ್ವಹಿಸುವ ಒತ್ತಡ ಇರುತ್ತದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರ ಜೊತೆ ಸಮನ್ವಯ ಸಾಧಿಸಿ ಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿದ್ದು ಇವರ ಕಾರ್ಯವೈಖರಿಗೆ ಹಿಡಿದ ಕನ್ನಡಿ.
ಜಿಲ್ಲೆಯಲ್ಲಿ ನಡೆದ ಜೈನಮುನಿ ಹತ್ಯೆ ಇಡೀ ರಾಜ್ಯದ ಗಮಸೆಳೆದಿತ್ತು. ಘಟನೆ ನಡೆದ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ತಮ್ಮ ಅಧಿಕಾರಿಗಳ ತಂಡವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಿದ್ದು ಡಾ. ಸಂಜೀವ್ ಪಾಟೀಲ್ ಅವರ ಹಿರಿಮೆ.
ಪ್ರಮುಖವಾಗಿ ಎಸ್ಪಿ ಫೋನ್ ಇನ್ ಕಾರ್ಯಕ್ರಮ ಡಾ. ಸಂಜೀವ್ ಪಾಟೀಲ್ ಅವರನ್ನು ಗ್ರಾಮೀಣ ಭಾಗದ ಜನ ಭರವಸೆಯಿಂದ ನೋಡುವಂತಾಗಿತ್ತು. ನೊಂದವರ ಹಾಗೂ ಕಾನೂನಿನ ನೆರವು ಅವಶ್ಯವಾಗಿರುವವರು ನೇರವಾಗಿ ಎಸ್ಪಿ ಜೊತೆ ಮಾತನಾಡುವ ಅವಕಾಶ ಮಾಡಿಕೊಟ್ಟಿದ್ದು ಇವರು. ಇದೇ ಕಾರಣಕ್ಕೆ ಜನರ ಹಲವಾರು ಸಮಸ್ಯೆಗೆ ಪರಿಹಾರ ಸಿಗುವಂತಾಗಿದೆ.
ಒಟ್ಟಿನಲ್ಲಿ ತಮ್ಮ ಕಡಿಮೆ ಅವಧಿಯಲ್ಲಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಸಂಜೀವ್ ಪಾಟೀಲ್ ಸೇವೆಯನ್ನು ಜಿಲ್ಲೆಯ ಜನ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

