
ಜೂನ್ 5 ರ ವರೆಗೆ ನಾನು ಮಾತಾಡಲ್ಲ ಎಂದ ಸಾಹುಕಾರ ; ಕಾರಣ ಏನು…?

ಬೆಳಗಾವಿ : ಮಾಜಿ ಸಚಿವ ಹಾಗೂ ಬೆಳಗಾವಿ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಸಧ್ಯ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಸದಾಕಾಲವೂ ಒಂದಿಲ್ಲೊಂದು ಹೇಳಿಕೆ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದ ಇವರು ಸಧ್ಯ ಜೂನ್ 4 ರ ಲೋಕಸಭಾ ಫಲಿತಾಂಶದ ನಂತರವೇ ಮಾತನಾಡುವೆ ಎನ್ನುತ್ತಿದ್ದಾರೆ.
ಭಾನುವಾರ ಬೆಳಗಾವಿ ನಗರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶದ ಪೂರ್ವ ತಯಾರಿ ವೀಕ್ಷಿಸಲು ನಗರದ ಮಾಲಿನಿ ಸಿಟಿ ಮೈದಾನಕ್ಕೆ ಬಂದಿದ್ದ ಇವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಾಪಸ್ಸಾದರು.
ಸಾಮಾನ್ಯವಾಗಿ ರಮೇಶ್ ಜಾರಕಿಹೊಳಿ ಅವರು ಸಹೋದರ ಬಾಲಚಂದ್ರ ಜಾರಕಿಹೊಳಿ ಮಾತು ಯಾವುದೇ ಕಾರಣಕ್ಕೆ ತಗೆದು ಹಾಕುವರಲ್ಲ. ಅವರು ಹೇಳುವುದನ್ನು ಪಾಲಿಸುವ ವ್ಯಕ್ತಿತ್ವ ಇವರದು. ಇದೇ ಕಾರಣಕ್ಕೆ ಸಹೋದರನಿಗೆ ಕೊಟ್ಟ ಮಾತಿನಂತೆ ರಮೇಶ್ ಜಾರಕಿಹೊಳಿ ಮಾತನಾಡುತ್ತಿಲ್ಲ ಎಂಬುದು ಚರ್ಚೆ.
ಈಗಾಗಲೇ ಬೆಳಗಾವಿ ಲೋಕಸಭಾ ಅಖಾಡದಲ್ಲಿ ತಮ್ಮ ರಾಜಕೀಯ ಎದುರಾಳಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಣದಲ್ಲಿದ್ದಾರೆ. ಜೊತೆಗೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜಾರಕಿಹೊಳಿ ಕುಟುಂಬ ರಣತಂತ್ರ ಹೆಣೆಯುತ್ತಿದೆ.
ಇತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಯಾರಿಗೂ ಬಗ್ಗದೆ ತಮ್ಮ ಚುನಾವಣಾ ಕೆಲಸ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗ ಬಿಜೆಪಿ ಅಭ್ಯರ್ಥಿ ವಿರುದ್ಧ ಗುಡುಗುವುದನ್ನು ಬಿಡುತ್ತಿಲ್ಲ. ಒಟ್ಟಿನಲ್ಲಿ ಇಬ್ಬರು ಪ್ರಭಲ ನಾಯಕರ ಮಧ್ಯೆ ನಡೆಯುತ್ತಿರುವ ಚುನಾವಣಾ ಯುದ್ಧ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿರುವುದು ವಿಶೇಷ.