Select Page

ಕೆಡಿಪಿ ಸಭೆಯಲ್ಲಿ ಕುಡುಕ ಶಿಕ್ಷಕರ ಕುರಿತು ಚರ್ಚೆ ; ಎಚ್ಚರಿಕೆ ಕೊಟ್ಟ ಕಾಗೆ

ಕೆಡಿಪಿ ಸಭೆಯಲ್ಲಿ ಕುಡುಕ ಶಿಕ್ಷಕರ ಕುರಿತು ಚರ್ಚೆ ; ಎಚ್ಚರಿಕೆ ಕೊಟ್ಟ ಕಾಗೆ

ಬೆಳಗಾವಿ : ಕೆಲ‌ ಶಾಲಾ ಶಿಕ್ಷಕರು ದಿನನಿತ್ಯ ಶಾಲೆಗೆ ಮಧ್ಯಪಾನ ಮಾಡಿ ಬರುತ್ತಿರುವ ಕುರಿತು ದೂರುಗಳು ಬಂದಿದ್ದು ಇಂತಹ ಶಿಕ್ಷಕರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶುಕ್ರವಾರ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಧ್ಯಪಾನ ಮಾಡಿ ಶಾಲೆಗೆ ಬರುವ ಶಿಕ್ಷಕರ ಕುರಿತು ಗಂಭೀರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು..

ಜಿಲ್ಲೆಯ ಅನೇಕ ಶಾಲೆಗಳಲ್ಲಿ ಶಿಕ್ಷಕರು ಮಧ್ಯಪಾನ ಮಾಡಿ ತರಗತಿಗೆ ಹಾಜರಾಗುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದು, ಇಂತವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಜೊತೆಗೆ ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ‌ ಬೀರುತ್ತಿರುವುದರಿಂದ ಶಿಕ್ಷಕರ ನೇಮಕಾತಿ ಪ್ರಸ್ತಾವವನ್ನು ಸಲ್ಲಿಸುವುದರ‌ ಜತೆಗೆ ಶಿಕ್ಷಕರ‌ ನೇಮಕಾತಿಗೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗಮನಕ್ಕೆ ತಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ. ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಬೇಕಾದಂತಹ ಜಾಗೆಯನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು‌ ಶೀಘ್ರವೆ ಪೂರ್ಣಗೊಳಿಸಬೇಕು. ರೈತರಿಗೆ ಅನಾನೂಕುಲ ಆಗದಂತೆ ದುರಸ್ತಿಗೊಳಪಟ್ಟ ವಿದ್ಯುತ್ ಪರಿವರ್ತಕಗಳನ್ನು ಶೀಘ್ರವೆ ಬದಲಾಯಿಸಲು ಕ್ರಮ‌ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಚಿಕ್ಕೋಡಿಯಲ್ಲಿ ನಿರ್ಮಾಣವಾದಂತಹ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ವೈದ್ಯಕೀಯ ಸಿಬ್ಬಂದಿ ನೇಮಕ ಆಗಿರುವುದರಿಂದ ಆಸ್ಪತ್ರೆಯನ್ನು ಬರುವ ಆಗಸ್ಟ್ 15 ರಂದು ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಸಮರ್ಪಕ ಪರಿಹಾರ ವಿತರಣೆ ಮಾಡಬೇಕು ಎಂದರು. ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮಾತನಾಡಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಡೆಸ್ಕ್ ಖರೀದಿಗೆ ಟೆಂಡರ ಕರೆಯಲಾಗಿದ್ದರೂ ಸಹ ಇದುವರೆ ಡೆಸ್ಕ್ ಪೂರೈಕೆ ಆಗದಿರುವ‌‌ ಕುರಿತು ಸಭೆಯ‌ ಗಮನಕ್ಕೆ ತಂದು ಟೆಂಡರ್ ಷರತ್ತುಗಳ ಅನುಸಾರ ಕಾಲಮಿತಿಯಲ್ಲಿ ಡೆಸ್ಕ್ ಪೂರೈಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ ಡೆಂಗ್ಯೂ‌ ನಿಯಂತ್ರಣಕ್ಕೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ‌ ಪಂಚಾತಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ‌ ಸ್ವಚ್ಚತೆಗೆ ಕ್ರಮ‌ವಹಿಸುವಂತೆ ಸೂಚಿಸಲಾಗಿದೆ. ಕಳೆದ‌ ಮೂರು ದಿನಗಳಲ್ಲಿ 350 ಪರೀಕ್ಷೆಗಳು ಜರುಗಿದ್ದು ಇದರಲ್ಲಿ 3 ಪ್ರಕರಣಗಳು ಧೃಡಪಟ್ಟಿರುತ್ತವೆ ಎಂದು ತಿಳಿಸಿದರು.

Advertisement

Leave a reply

Your email address will not be published. Required fields are marked *

error: Content is protected !!