
ಪಂಚಮಸಾಲಿ ಮೀಸಲಾತಿಗಾಗಿ ಸಾಮೂಹಿಕ ರಾಜೀನಾಮೆಗೆ ಸಿದ್ಧ ; ಕಾಂಗ್ರೆಸ್ ಶಾಸಕ ರಾಜು ಕಾಗೆ

ಕಾಗವಾಡ : ಪಂಚಮಸಾಲಿ ಹೋರಾಟದಿಂದ ಕೆಲವರು ದೂರ ಉಳಿದಿದ್ದಾರೆ. ನಾವು ಕೇವಲ ಆಗ್ರಹ ಮಾಡಿದರೆ ಇದರಿಂದ ಯಾವುದೇ ಲಾಭವಿಲ್ಲ. ನಾಳೆಯೆ ಎಲ್ಲಾ ಪಂಚಮಸಾಲಿ ಶಾಸಕರು ರಾಜೀನಾಮೆ ನೀಡಿದರೆ ಸಮುದಾಯಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತಾರೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅಭಿಪ್ರಾಯಪಟ್ಟರು.
ಕಾಗವಾಡದಲ್ಲಿ ನಡೆಸ ಪಂಚಮಸಾಲಿ ಸಮುದಾಯದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಸಪ್ತ ಋಷಿಗಳ ತ್ಯಾಗದ ಪ್ರತೀಕವಾಗಿ ಕೆಎಲ್ಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇತಿಹಾಸದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ನಾವು ಸಮುದಾಯಕ್ಕಾಗಿ ರಾಜೀನಾಮೆ ನೀಡೋಣ ಎಂದು ಪಂಚಮಸಾಲಿ ಶಾಸಕರಿಗೆ ಕಾಗೆ ವಿನಂತಿ ಮಾಡಿದರು.
ನಾನು ಒಬ್ಬ ಪಂಚಮಸಾಲಿ ಹೋರಾಟದಲ್ಲಿ ಭಾಗವಹಿಸಲಿಲ್ಲ ಎಂದರೆ ಏನಾಗುತ್ತದೆ ಎಂಬ ಅಭಿಪ್ರಾಯ ಕೆಲ ಶಾಸಕರಲ್ಲಿದೆ. ಆದರೆ ಸಮುದಾಯದ ಎಲ್ಲಾ ಶಾಸಕರು ಒಟ್ಟುಗೂಡಿ ರಾಜೀನಾಮೆ ನೀಡಿದರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದರು.
ರಾಜ್ಯದಿಂದ ಮೀಸಲಾತಿ ಕುರಿತು ಕೇಂದ್ರಕ್ಕೆ ಮನವಿ ಮಾಡಲಿ. ಅಲ್ಲಿ ನಮ್ಮ ಸಂಸದರಿದ್ದಾರೆ. ಒಟ್ಟಿನಲ್ಲಿ ಸಮುದಾಯಕ್ಕೆ ನ್ಯಾಯ ಸಿಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಂಚಮಸಾಲಿ ಪೀಠದ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.