ಗಂಗಾ ಆರತಿ ರೀತಿಯಲ್ಲಿ ಕೃಷ್ಣಾ ಆರತಿ ಕಾರ್ಯಕ್ರಮ ; ಸಂಗಮೇಶ ನಿರಾಣಿ ಏನಂದ್ರು…..?
ಅಥಣಿ : ಉತ್ತರ ಭಾರತದಲ್ಲಿ ಗಂಗಾರತಿ ಕಾರ್ಯಕ್ರಮದ ಮಾದರಿಯಲ್ಲಿ ಹಿಪ್ಪರಗಿ ಗ್ರಾಮದಲ್ಲಿ 2 ನೇ ವರ್ಷದ ಕೃಷ್ಣಾ ಆರತಿ ಕಾರ್ಯಕ್ರಮ ಆಗಸ್ಟ್ 16 ರಂದು ಜರುಗಲಿದೆ. ಸು. 200 ಜನ ನಾಗಾ ಸಾಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ನಿರಾಣಿ ಉದ್ಯಮ ಸಮೂಹದ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಅವರು ಗುರುವಾರ ರಾತ್ರಿ ಹಿಪ್ಪರಗಿಯಲ್ಲಿ ಜರುಗಿದ ಕೃಷ್ಣಾ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ನಾಡಿನ ಅನೇಕ ಮಠಾಧೀಶರು, ಸಾಹಿತಿಗಳು, ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ, ಕೃಷ್ಣಾ ಆರತಿ, ನೈವೇದ್ಯ ಅರ್ಪಣೆ, ಕೃಷ್ಣಾ ನದಿಯ ಕುರಿತು ವಿಶೇಷ ಗೋಷ್ಠಿ ಸೇರಿದಂತೆ ಅನೇಕರ ಮಹತ್ವ ಪೂರ್ಣ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೆ ನಾಗಾ ಸಾಧುಗಳು ಉಳಿದುಕೊಳ್ಳಲು, ಅವರ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. 150 ಕ್ಕಿಂತಲೂ ಹೆಚ್ಚಿಗೆ ದೇವರ ಪಲ್ಲಕ್ಕಿ ಆಗಮಿಸಲಿವೆ. ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆಗಳಿಂದ 2 ಲಕ್ಷಕ್ಕಿಂತ ಹೆಚ್ಚು ರೈತರು ಭಾಗಿಯಾಗಲಿದ್ದಾರೆ.
ಸಾಹಿತಿಗಳು, ಕಲಾವಿದರು ಕೃಷ್ಣಾ ನದಿಯ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ರಚನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಸರ್ಕಾರ ಕಾವೇರಿ, ತುಂಗಾ ಹಾಗೂ ಇತರ ನದಿಗಳಿಗೆ ಕೊಡುವ ಪ್ರಾತಿನಿಧ್ಯವನ್ನು ಕೃಷ್ಣಾ ನದಿಗೂ ಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹರ್ಷಾನಂದ ಸ್ವಾಮೀಜಿ, ಸಾಹಿತಿ ಸಿದ್ದರಾಜ ಪೂಜಾರಿ, ಎನ್.ಸಿ. ಚೌಗಲಾ, ಬಸವರಾಜ ದಲಾಲ, ಪುಂಡಲೀಕ ಪಾಲಬಾವಿ, ಮಲ್ಲಪ್ಪ ಹಂಚಿನಾಳ, ಸೋಮನಾಥ ಪಾಟೀಲ, ಶಂಕರ ಕಿತ್ತೂರ, ಗೂಳಪ್ಪ ಶಿವಪೂಜಿ, ಭೀಮಪ್ಪ ಹೊನಗೊಂಡ, ಮಹೇಶ ಮಠದ, ಮಲ್ಲಪ್ಪ ಚವ್ಹಾಣ, ಅಣ್ಣಪ್ಪ ಸಾವಳಗಿ, ಚಿದಾನಂದ ಯಲಾಗೋಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


